ಇನ್ನೂ ಮೂರುವರೆ ವರ್ಷ ನಾನೇ ಸಿಎಂ: ಸಿದ್ದರಾಮಯ್ಯ,ದೇವೇಗೌಡ ಟಾಂಗ್!
Views: 49
ಬೆಂಗಳೂರು: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗಿರುವ ಹೊತ್ತಿನಲ್ಲೇ ಮತ್ತೆ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಸಂಡೂರು ಉಪಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರ ಗುರುವಾರ ಮತಯಾಚನೆ ಮಾಡಿದ ಸಿಎಂ ಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ಸಿಎಂ ಆಗಿ ಮುಂದುವರಿಯಲಿದ್ದೇನೆ ಹೇಳಿಕೆ ನೀಡಿದ್ದಾರೆ.
ಸಂಡೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಮೂರುವರೆ ವರ್ಷ ಯಾರು ಅಧಿಕಾರದಲ್ಲಿರುವವರು ಎಂದು ಪ್ರಶ್ನಿಸುತ್ತಾರೆ. ಆಗ ಸಮಾವೇಶದಲ್ಲಿ ನೆರೆದಿದ್ದ ಜನರು, ‘ಕಾಂಗ್ರೆಸ್’ ಎಂದು ಘೋಷಣೆ ಕೂಗಿದ್ದಾರೆ. ಜನರ ಮಾತಿಗೆ ದನಿಗೂಡಿಸಿ ಮಾತನಾಡಿದ ಸಿಎಂ, ‘ಸಿದ್ದರಾಮಯ್ಯ, ಕಾಂಗ್ರೆಸ್’ ಎಂದು ಒತ್ತುಕೊಟ್ಟು ಹೇಳಿದ್ದಾರೆ. ಆ ಮೂಲಕ ಮೂರುವರೆ ವರ್ಷ ನಾನೇ ಸಿಎಂ ಎಂಬ ಸಂದೇಶ ಸಾರಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಅತ್ತ ಚನ್ನಪಟ್ಟಣದಲ್ಲಿ ಪ್ರಚಾರ ನಿರತರಾಗಿರುವ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗಳನ್ನು ಟಿವಿಗಳಲ್ಲಿ ನೋಡಿದೆ. ನಾನು ನಿನ್ನೆಯೂ ಮುಖ್ಯಮಂತ್ರಿ, ನಾಳೆಯೂ ಮುಖ್ಯಮಂತ್ರಿ, ನಾಡಿದ್ದೂ ಮುಖ್ಯಮಂತ್ರಿ ಎನ್ನುತ್ತಾರೆ. ಎಂಥಾ ಮಹಾನುಭಾವ ಎಂದು ದೇವೇಗೌಡರು ವ್ಯಂಗ್ಯವಾಡಿದ್ದಾರೆ.
ಮುಗಿಯದ ಸಿಎಂ ಹುದ್ದೆ ಬದಲಾವಣೆ ಚರ್ಚೆ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 136 ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ನಂತರ ಸಿದ್ದರಾಮಯ್ಯ ಸಿಎಂ ಆದರೂ ಎರಡೂವರೆ ವರ್ಷದ ನಂತರ ಅಧಿಕಾರ ಬಿಟ್ಟುಕೊಡಲಿದ್ದಾರೆ ಎಂಬ ವದಂತಿ ಇತ್ತು. ಆದರೆ, ಆ ಬಗ್ಗೆ ಕಾಂಗ್ರೆಸ್ ಪಕ್ಷ ಅಧಿಕೃತ ಮಾಹಿತಿಯನ್ನಂತೂ ನೀಡಿಲ್ಲ. ಆದರೆ, ನಂತರದ ಅನೇಕ ದಿನಗಳಲ್ಲಿ ಸಿಎಂ ಹುದ್ದೆ ವಿಚಾರವಾಗಿ ಬಹಳಷ್ಟು ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದ್ದವು.