ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ ಬ್ರಹ್ಮರಥೋತ್ಸವ ಸಂಭ್ರಮ -2023
ಕುಂಭಾಸುರನಿಗೆ ಭೀಮನ ಅಸಿಯಿಂದ ಮರಣ ಸಂಭವಿಸಿದ ಕಾರಣ ಈ ಗೌತಮ ಕ್ಷೇತ್ರವು ಕುಂಭಾಸಿ ಹೆಸರಿನಿಂದ ಸುಪ್ರಸಿದ್ಧವಾಯಿತು. ಆ ಕ್ಷೇತ್ರವೇ ನಾಗಾಚಲವಾಗಿದ್ದು ಇದಕ್ಕೆ 'ಆನೆಗುಡ್ಡೆ' ಎಂದು ಕರೆಯಲಾಗುತ್ತದೆ. ಗಣಪತಿಯು ಆನೆ ರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆಮೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಆದ್ದರಿಂದ ಈ ಕ್ಷೇತ್ರವು 'ಆನೆಗುಡ್ಡೆ ಎಂದು ಪ್ರಸಿದ್ಧ'ವಾಯಿತು.

Views: 23

ಹಿಂದೆ ಪೌಲಸ್ತ್ಯ ಪ್ರಪೌತ್ರನಾದ ಕುಂಭಾಸುರನೆಂಬ ರಾಕ್ಷಸನು ಶ್ರೀರಾಮನಿಗೆ ಹೆದರಿ ಮಹೇಂದ್ರಗಿರಿಯಲ್ಲಿ ಅಡಗಿಕೊಂಡಿದ್ದನು. ನಂತರ ಅಲ್ಲಿಂದ ಹೊರಟು ನಾರದರ ಮಾತಿನಂತೆ ಈಶ್ವರನನ್ನು ಮೆಚ್ಚಿಸಿ ವರ ಪಡೆದು ವರ ಬಲೋತ್ಕಾರದಿಂದ ಮದೋನ್ಮತನಾಗಿ ಈ ಕ್ಷೇತ್ರಕ್ಕೆ ಬಂದು ಕೈಗೆ ಸಿಕ್ಕಿದ ಜನರನ್ನು ದಂಡಿಸಿ ತನ್ನ ಸೇನಾ ಸಮೇತವಾಗಿ ರಾಜ್ಯ ಸ್ಥಾಪನೆ ಮಾಡಿ ಆಡಳಿತ ಮಾಡ ತೊಡಗಿದನು. ಇದರಿಂದ ಭಯಭೀತರಾದ ಸ್ಥಳೀಯರು ಅಲ್ಲಿಂದ ಓಡಿ ಹೋದರು. ಆ ಸಮಯದಲ್ಲಿ ಪಾಂಡವರು ದ್ರೌಪದಿ ಸಮೇತರಾಗಿ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರ ತೀರದಲ್ಲಿ ಇರುವುದನ್ನು ಅರಿತ ಗೌತಮರು ಹಾಗೂ ಇತರೆ ಋಷಿಗಳು ಲೋಕಕಂಟಕನಾದ ಕುಂಭಾಸುರನ ಉಪಟಳದ ಬಗ್ಗೆ ವಿವರಣೆ ನೀಡಿ ಅವನು ನೀಡುತ್ತಿರುವ ತೊಂದರೆಗಳನ್ನು ಕುರಿತು ವಿವರಿಸಿದರು. ಅದನ್ನು ಕೇಳಿದ ಧರ್ಮರಾಯನು ಕುಂಭಾಸುರನನ್ನು ಸಂಹರಿಸಲು ಸಹೋದರ ಭೀಮಸೇನನಿಗೆ ಅಪ್ಪಣೆ ನೀಡಿದರು. ಪಾಂಡವರು ಭಾರ್ಗವ ಕ್ಷೇತ್ರಕ್ಕೆ ಬಂದು ಮಧುವನದಲ್ಲಿ ತಂಗಿ ಹರಿಹರ ದರ್ಶನ ಮಾಡಿದರು. ನಂತರ ಸ್ವಲ್ಪ ದಿನ ಅಲ್ಲಿದ್ದು ಅಲ್ಲಿಂದ ನಾಗಾಚಲಕ್ಕೆ ಬಂದು ಗಣೇಶನನ್ನು ಅರ್ಚಿಸಿದರು.

ಸುಪ್ರಸಿದ್ಧ ಕುಂಭಾಸಿಗೆ ‘ಆನೆಗುಡ್ಡೆ’ ಹೆಸರು ಹೇಗೆ ಬಂತು..?
ಅಣ್ಣನ ಮಾತಿನಂತೆ ಭೀಮನು ಯುದ್ಧಕ್ಕೆ ಸನ್ನದ್ಧನಾದನು. ಶಂಕನಾದ ಮಾಡುತ್ತಾ ಕುಂಭಾಸುರ ಇರುವ ಕಡೆ ಯುದ್ಧಕ್ಕೆ ತರಳಿದನು. ಇವರಿಬ್ಬರ ನಡುವೆ ಭಯಂಕರವಾದ ಯುದ್ಧ ನಡೆಯಿತು ಕುಂಭಾಸುರ ಈಶ್ವರನಿಂದ ವರ ಪಡೆದಿದ್ದರಿಂದ ಅವಧ್ಯನಾಗಿಯೇ ಉಳಿದು, ಭೀಮನು ಸರಿಸಮಾನಾಗಿ ಹೋರಾಟ ಮಾಡಿದರು. ಒಂದು ಹಂತದಲ್ಲಿ ಕುಂಭಾಸುರ ಮುನ್ನಡೆಯನ್ನು ಸಾಧಿಸಿದನು. ಇದರಿಂದ ಭೀಮನು ಚಿಂತಿಸುತ್ತಿರುವಾಗ ಅಶರೀರವಾಣಿಯೊಂದು ಕೇಳಿ ಬಂದಿತು. “ವಿಘ್ನೇಶ್ವರನ ಅನುಗ್ರಹದಿಂದ ಪಡೆದ ಕತ್ತಿಯಿಂದ ಅಸಿ ಮಾತ್ರ ಕುಂಭಾಸುರನನ್ನು ಮಣಿಸಬಹುದು” ಎಂದು ತಿಳಿಸಿ ತಾನು.ಕೂಡಲೇ ಭೀಮನು ಗಜರೂಪಿಯಾದ ಗಣೇಶನನ್ನು ಧ್ಯಾನಿಸಿದನು.
ಆಗ “ವಿಘ್ನೇಶ್ವರನು ಆನೆ ರೂಪದಲ್ಲಿ ಕಾಣಿಸಿಕೊಂಡು ಪ್ರಸಾದ ರೂಪದಲ್ಲಿ ಭೀಮನಿಗೆ ಖಡ್ಗವನ್ನು ನೀಡಿದ ಆ ಕತ್ತಿಯಿಂದ ಭೀಮನು ಕುಂಭಾಸುರನನ್ನ ಸಂಹರಿಸಿದನು”. ಹೀಗೆ ಆತನೊಂದಿಗಿದ್ದ ರಾಕ್ಷಸರೆಲ್ಲರೂ ನಿರ್ನಾಮವಾದರು.
ಹೀಗೆ ಕುಂಬಾಸುರನಿಗೆ ಭೀಮನ ಅಸಿಯಿಂದ ಮರಣ ಸಂಭವಿಸಿದ ಕಾರಣ ಈ ಗೌತಮ ಕ್ಷೇತ್ರವು ಕುಂಭಾಸಿ ಹೆಸರಿನಿಂದ ಸುಪ್ರಸಿದ್ಧವಾಯಿತು. ಆ ಕ್ಷೇತ್ರವೇ ‘ನಾಗಾಚಲ’ವಾಗಿದ್ದು ಇದಕ್ಕೆ ‘ಆನೆಗುಡ್ಡೆ’ ಎಂದು ಕರೆಯಲಾಗುತ್ತದೆ.
ಗಣಪತಿಯು ಆನೆ ರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆಮೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಆದ್ದರಿಂದ ಈ ಕ್ಷೇತ್ರವು ‘ಆನೆಗುಡ್ಡೆ ಎಂದು ಪ್ರಸಿದ್ಧ’ವಾಯಿತು.
‘ಮೂಲಬಿಂಬ’ ನಿರಾಕಾರ ಮೂರ್ತಿ ‘ಗಣಪತಿ’
ಹೀಗೆ ನಾಗಾಚಲದಲ್ಲಿ ಸ್ವಯಂವ್ಯಕ್ತನಾದ ವಿಶ್ವಂಭರ ರೂಪಿ ಗಣೇಶನನ್ನು ವಿಧಿ ನಿಯಮದಂತೆ ಕ್ಷೇತ್ರಕ್ಕೆ ಬಂದ ಭಕ್ತರು ಭಕ್ತಿ ಪೂರಕವಾಗಿ ಆರಾಧಿಸಿ ಇಷ್ಟಾರ್ಥಗಳನ್ನು ಪಡೆದು ಕೃತಾರ್ಥರಾಗುತ್ತಾರೆ.
ಇಲ್ಲಿನ ಉಪಾಧ್ಯಾಯ ಕುಟುಂಬದವರು ಶ್ರದ್ಧಾ ಭಕ್ತಿಯಿಂದ ಶ್ರೀ ವಿನಾಯಕನನ್ನು ಆರಾಧಿಸಿ, ಶ್ರೀ ದೇವರಲ್ಲಿ ವಿಶೇಷ ಕಲಾ ಸಾನಿಧ್ಯ ನೆಲೆಸುವಂತೆ ಮಾಡಿದರು.
ಆ ದೇವಸ್ಥಾನ ನಂತರ ದಶಕಗಳ ಕಾಲ ಅಸ್ಪಷ್ಟವಾಗಿ ಉಳಿದಿತ್ತು. ಆ ದೇವಸ್ಥಾನವೇ ಈಗ ನಾವು ಕಾಣುವ ಪ್ರತಿದಿನ ಸಹಸ್ರಾರು ಭಕ್ತರು ಭೇಟಿ ನೀಡುವ ‘ಆನೆಗುಡ್ಡೆಯ ವಿನಾಯಕ ದೇವಾಲಯ‘ ಇದಾಗಿದೆ.
ಈ ಕ್ಷೇತ್ರದಲ್ಲಿ ಮೂಲ ಶಿಲೆಯನ್ನು ‘ಮೂಲಬಿಂಬ’ ಎಂದು ಕರೆಯಲಾಗುತ್ತದೆ ಅದು ನಿರಾಕಾರ ಮೂರ್ತಿಯಾಗಿದೆ ಇದಕ್ಕೆ ಕೃತಕವಾಗಲಿ, ನೈಸರ್ಗಿಕವಾಗಲಿ ಕೆತ್ತನೆ ಕೆಲಸವಾಗಿರುವುದಿಲ್ಲ ಆದರೆ, ಈ ವಿಗ್ರಹದಲ್ಲಿ ಮಸುಕಾದ ಆನೆಯ ಸೊಂಡಿಲು ಮಾತ್ರ ಕಂಡುಬರುತ್ತದೆ ಈ ಮೂಲಬಿಂಬವನ್ನು ಭಕ್ತರು ಬೆಳಿಗ್ಗೆ ಮತ್ತು ಮಧ್ಯಾಹ್ನ ಮಹಾಪೂಜೆಯ ಮೊದಲು ಪ್ರತಿದಿನ ಎರಡು ಬಾರಿ ವೀಕ್ಷಿಸಬಹುದಾಗಿದೆ.
ಅಭಿಷೇಕದ ನಂತರ ಗಣಪತಿಗೆ ಮುಖವಾಡ ಧರಿಸಿದ ನಂತರ ಗಣಪತಿಯು ಕುಳಿತಿರುವ ಭಂಗಿಯಲ್ಲಿರುವುದನ್ನು ಕಾಣಬಹುದು. ಇದೇ ಕುಳಿತ ಸ್ಥಿತಿಯಲ್ಲಿ ಉಳಿದ ಭಾಗ ಇಡೀ ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ನಡೆಯುವ ಅಭಿಷೇಕದ ವರೆಗೆ ಗಣಪತಿ ಕುಳಿತ ಭಂಗಿಯಲ್ಲಿರಲು ಬಯಸುತ್ತಾನೆ. ಮರುದಿನ ಅಭಿಷೇಕದ ನಂತರ ಗಣಪತಿ ಮತ್ತೆ ನಿಲ್ಲುವ ಭಂಗಿಗೆ ಬರುತ್ತಾನೆ.
ಗಣಪತಿಗೆ ಇಷ್ಟಾರ್ಥ ಸೇವೆಗಳು
ಇಲ್ಲಿ ಶ್ರೀ ದೇವರಿಗೆ ಪಂಚ ಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ರಂಗಪೂಜೆ ಇತ್ಯಾದಿ ಸೇವೆಗಳು ನಿರಂತರವಾಗಿ ನಡೆಯುತ್ತದೆ.
ಪ್ರತಿ ಸಂಕಷ್ಟಹರ ಚತುರ್ಥಿಯಂದು ದೇವಾಲಯದ ವತಿಯಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ ಜರಗುತ್ತದೆ.
ಆನೆಗುಡ್ಡೆ ಶ್ರೀ ಕ್ಷೇತ್ರಕ್ಕೆ ದೂರದ ಊರುಗಳಿಂದ ಬರುವ ಭಕ್ತರಿಗೆ ಅನುಕೂಲವಾಗುವಂತೆ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಬರುವ ಭಕ್ತಾದಿಗಳಿಗೆ ಉಚಿತ ಅನ್ನ ಸಂತರ್ಪಣೆ ಇರುತ್ತದೆ.

ಈ ಕ್ಷೇತ್ರಕ್ಕೆ ಹೀಗೆ ಬನ್ನಿ…..
ಈ ದೇವಸ್ಥಾನಕ್ಕೆ ಸುಲಭವಾಗಿ ಆಗಮಿಸುವ ಮಾರ್ಗವಿದೆ ಈ ಪ್ರದೇಶವು ಉಡುಪಿ ಕುಂದಾಪುರದ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಹತ್ತಿರ ಕುಂದಾಪುರದಿಂದ 5 ಕಿ.ಮೀ. ಉಡುಪಿಯಿಂದ 26 ಕಿಲೋ ಮೀಟರ್ ದೂರದಲ್ಲಿದೆ. ದೇವಸ್ಥಾನದ ಎದುರುಗಡೆ ಮಹಾಲಿಂಗೇಶ್ವರನನ್ನು ಹರಿಹರೇಶ್ವರ ದೇವಾಲಯ ಒಂದು ಪರ್ಲಾಂಗ್ ದೂರದಲ್ಲಿದೆ. ದೇವಸ್ಥಾನದ ಹಿಂಭಾಗದ ವಕ್ವಾಡಿ ಮಾರ್ಗವಾಗಿ ಶ್ರೀ ವಾದಿರಾಜರ ಜನ್ಮ ಕ್ಷೇತ್ರ ಹೂವಿನಕೆರೆಯಲ್ಲಿದೆ.
ಬ್ರಹ್ಮರಥೋತ್ಸವ ಸಂಭ್ರಮ- 2023
ಶ್ರೀ ಕ್ಷೇತ್ರದಲ್ಲಿ ದಿನಾಂಕ 16.12.203ನೇ ಶನಿವಾರ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ನಡೆಯಲಿದೆ.
ದಿನಾಂಕ 13.12.2023 ರಿಂದ 17.12.2023ರ ವರೆಗೆ ಧಾರ್ಮಿಕ, ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ 13.12 2023 ರಂದು ಸತ್ಯ ಗಣಪತಿ ವ್ರತ, ಗಣಹೋಮ, ಸ್ವಸ್ತಿ ವಾಚನ, ಉಪನಿಷತ್ ಹೋಮ, ಮಹಾಪೂಜೆ,ರಾತ್ರಿ -ರಂಗ ಪೂಜೆ, ಡೋಲಾರೋಹಣ, ಪಲ್ಲಕ್ಕಿ ಉತ್ಸವ.
ಸಂಜೆ 5:30 ರಿಂದ ಕೋಲಾಟ, ಭಜನಾ ನೃತ್ಯ, ಜಾನಪದ ನೃತ್ಯ,
ರಾತ್ರಿ 7 ಕ್ಕೆ ಯಕ್ಷಗಾನ ‘ಕನಕಾಂಗಿ ಕಲ್ಯಾಣ’
ದಿನಾಂಕ 14.12.2023 ರಂದು ಪೂರ್ವಾಹ್ನ ಉಪನಿಷತ್, ಕಲಾಶಭಿಷೇಕ, ಗಣಹೋಮ,ಸತ್ಯ ಗಣಪತಿ ವ್ರತ, ರಾತ್ರಿ- ಪುರ ಮೆರವಣಿಗೆ, ರಂಗ ಪೂಜೆ, ಪಲ್ಲಕ್ಕಿ ಉತ್ಸವ
ಸಂಜೆ 5:30ಕ್ಕೆ ಭರತನಾಟ್ಯ, ರಾತ್ರಿ- 7:30ಕ್ಕೆ ‘ಭಕ್ತಿ ಭಾವ ಸುಗಮ ಸಂಗೀತ’
ದಿನಾಂಕ 15 .12 .2023 ರಂದು ನವಕ ಪ್ರಧಾನ ಕಲಾಭಿಷೇಕ, ಅಗ್ನಿ ಜನನ, ಗಣ ಹೋಮ, ರಾತ್ರಿ- ಪುರ ಮೆರವಣಿಗೆ, ರಂಗ ಪೂಜೆ, ಸುವರ್ಣ ಪಲ್ಲಕ್ಕಿ ಉತ್ಸವ
ಸಂಜೆ -6ಕ್ಕೆ ‘ಮ್ಯಾಜಿಕ್ ವಿಸ್ಮಯ ಹಾಗೂ ಮನೋರಂಜನೆ ಜಾದೂ’ ಕಾರ್ಯಕ್ರಮ
ದಿನಾಂಕ 16 12 23 ರಂದು ‘ಅಷ್ಟೋತ್ತರ ಸಹಸ್ರ ನಾಳಿಕೆರ ಗಣ ಯಾಗ’ ಮತ್ತು ‘ಬ್ರಹ್ಮರಥೋತ್ಸವ’ ಭಜಕರಿಂದ ಪಾನಕ ವಿತರಣೆ, ಅನ್ನ ಸಂತರ್ಪಣೆ ರಾತ್ರಿ-7ಕ್ಕೆ ‘ರಥೋತ್ಸವ’ ಸುಡುಮದ್ದು ಪ್ರದರ್ಶನ
ಸಂಜೆ 5ರಿಂದ ಸ್ಯಾಕ್ಸೋ ಫೋನ್ ವಾದನ
ರಾತ್ರಿ 9:30ಕ್ಕೆ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ
ದಿನಾಂಕ 17.12.2023 ರಂದು ಚೂರ್ಣೋತ್ಸವ, ವಸಂತರಾಧನೆ, ಮಂತ್ರಾಕ್ಷತೆ ನಡೆಯಲಿದೆ.

ಶ್ರೀ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಶ್ರೀ ಕೆ. ಶ್ರೀರಮಣ ಉಪಾಧ್ಯಾಯ, ಅನುವಂಶಿಕ ಆಡಳಿತ ಧರ್ಮದರ್ಶಿ.
ಶ್ರೀ ಕೆ. ಶ್ರೀಶ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರು.
ಶ್ರೀ ಕೆ. ವಿಠಲ ಉಪಾಧ್ಯಾಯ. ಅನುವಂಶಿಕ ಧರ್ಮದರ್ಶಿ.
ಶ್ರೀ ಕೆ. ನಿರಂಜನ ಉಪಾಧ್ಯಾಯ, ಅನುವಂಶಿಕ ಧರ್ಮದರ್ಶಿ.
Address
Anegudde Shri Vinayaka temple kumbasi -576257. kundapura, taluk, Udupi district,
Contact -office ph- 7406093 533 Ph- 9480272221
Karnataka Bank kumbasi 4152500100097901
IFSC KARB0000415
ಆನೆಗುಡ್ಡೆ ಬೃಹ್ಮರಥೋತ್ಸವಕ್ಕೆ ಶುಭ ಕೋರುವವರು,















