ಆಧಾರ್ –ಪೌರತ್ವ, ಗುರುತಿನ ಚೀಟಿ, ವಿಳಾಸದ ದಾಖಲೆಯಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ
Views: 24
ಕನ್ನಡ ಕರಾವಳಿ ಸುದ್ದಿ: ಆಧಾರ್ ಕಾರ್ಡ್ ಅನ್ನು ಪೌರತ್ವ, ವಾಸಸ್ಥಳ ಮತ್ತು ವಸತಿ ವಿಳಾಸದ ಪುರಾವೆಯಾಗಿ ಬಳಸುತ್ತಿರುವುದು ತಪ್ಪು. ಈ ದಾಖಲೆಯನ್ನು ಕೇವಲ ಗುರುತಿನ ಚೀಟಿಯಾಗಿ ಮಾತ್ರ ಬಳಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಅರ್ಜಿಯನ್ನು ಹಾಕಿದ್ದು, ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿನ ಪುರಾವೆಯಾಗಿ ಬಳಸಬೇಕೇ ಹೊರತು ಪೌರತ್ವ, ವಾಸಸ್ಥಳ, ವಿಳಾಸ ಮತ್ತು ಜನ್ಮ ದಿನಾಂಕದ ಪುರಾವೆಯಾಗಿ ಬಳಸದಂತೆ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ವಿನಂತಿಸಿದ್ದಾರೆ.
ವಕೀಲ ಅಶ್ವಾನಿ ದುಬೆ ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯು, ಹೊಸ ಮತದಾರರ ನೋಂದಣಿ ಅರ್ಜಿಯಲ್ಲಿ ಆಧಾರ್ ಅನ್ನು ಜನ್ಮ ದಿನಾಂಕ ಮತ್ತು ವಾಸಸ್ಥಳದ ಪುರಾವೆಯಾಗಿ ಬಳಸುವುದನ್ನು ಆಧಾರ್ ಕಾಯ್ದೆ 2016 ಸೆಕ್ಷನ್ 9, ಜನಪ್ರತಿನಿಧಿ ಕಾಯ್ದೆ (ಆರ್‌ಪಿಎ) 1950 ರ ಸೆಕ್ಷನ್ 23(4) ಮತ್ತು ಸಂವಿಧಾನದ ವಿಧಿ 14ರ ಉಲ್ಲಂಘನೆ ಎಂದು ಪರಿಗಣಿಸಲು ನಿರ್ದೇಶನಗಳನ್ನು ಕೋರಲಾಗಿದೆ.
ಆಧಾರ್ ಕಾಯ್ದೆ 2016 ಸೆಕ್ಷನ್ 9 ರ ಪ್ರಕಾರ ಆಧಾರ್ ಪೌರತ್ವ ಅಥವಾ ವಾಸಸ್ಥಳದ ಪುರಾವೆಯಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಆಗಸ್ಟ್ 22, 2023 ರ ಅಧಿಸೂಚನೆಯೂ ಸಹ ಆಧಾರ್ ಗುರುತಿನ ಪುರಾವೆಯೇ ಹೊರತು ಪೌರತ್ವ, ವಿಳಾಸ ಅಥವಾ ಜನ್ಮ ದಿನಾಂಕದ ಪುರಾವೆಯಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
“ಹೀಗಿದ್ದೂ, ಆಧಾರ್ ಅನ್ನು ಶಾಲಾ ದಾಖಲಾತಿ, ಆಸ್ತಿ ಖರೀದಿ, ಜನನ ಪ್ರಮಾಣಪತ್ರ, ಪಡಿತರ ಚೀಟಿ ಮತ್ತು ಚಾಲನಾ ಪರವಾನಗಿ ಪಡೆಯಲು ವಯಸ್ಸು, ಪೌರತ್ವ ಮತ್ತು ವಾಸಸ್ಥಳದ ಪುರಾವೆಯಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ, ಹೊಸ ಮತದಾರರ ನೋಂದಣಿ ಅರ್ಜಿಯಲ್ಲಿಯೂ (ಫಾರಂ-6) ಇದನ್ನು ಜನ್ಮ ದಿನಾಂಕ ಮತ್ತು ವಾಸಸ್ಥಳದ ಪುರಾವೆಯಾಗಿ ಬಳಸಲಾಗುತ್ತಿದೆ. ಇದರಿಂದಾಗಿ, ನುಸುಳುಕೋರರು ಮತ್ತು ಅಕ್ರಮ ವಲಸಿಗರು ಆಧಾರ್ ಬಳಸಿ ವಿವಿಧ ಅಧಿಕೃತ ದಾಖಲೆಗಳನ್ನು ಪಡೆಯುತ್ತಿದ್ದಾರೆ” ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಪ್ರಸ್ತುತ ಫಾರಂ – 6 ರ ಅಡಿಯಲ್ಲಿರುವ ಪರಿಶೀಲನಾ ವ್ಯವಸ್ಥೆಯು ದೋಷಪೂರಿತವಾಗಿದ್ದು, ಸರಿಯಾದ ಪೂರಕ ದಾಖಲೆಗಳಿಲ್ಲದ ವ್ಯಕ್ತಿಗಳೂ ಸಹ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಇದು ಅವಕಾಶ ಮಾಡಿಕೊಡಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಗಳಲ್ಲಿ ಬಳಸಲಾಗುವ ಪರಿಶೀಲನಾ ಚೌಕಟ್ಟನ್ನು ಸಮಗ್ರವಾಗಿ ಸುಧಾರಿಸಬೇಕು. ಈ ಸುಧಾರಣೆಗಳ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು, ಸೈಬರ್ ಸುರಕ್ಷತೆ ಹಾಗೂ ವಿಧಿವಿಜ್ಞಾನ (ಫೋರೆನ್ಸಿಕ್) ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಉಸ್ತುವಾರಿ ಸಮಿತಿಯನ್ನು ರಚಿಸಬೇಕು ಎಂದು ಅರ್ಜಿ ಪೀಠವನ್ನು ಕೋರಿದೆ.






