ಸಾಮಾಜಿಕ

ಹಾಡಹಗಲೇ ಮನೆಗೆ ನುಗ್ಗಿ ಪತ್ನಿಯ ಅಪಹರಣ: ಪತಿ ವಿರುದ್ಧ ಪ್ರಕರಣ ದಾಖಲು!

Views: 146

ಕನ್ನಡ ಕರಾವಳಿ ಸುದ್ದಿ: ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಹಾಡಹಗಲೇ ಸಂಬಂಧಿಕರ ಮನೆಯಲ್ಲಿದ್ದ ಪತ್ನಿಯನ್ನು ಪತಿಯೇ ಅಪಹರಿಸಿರುವ ಘಟನೆ ಹೊನ್ನಾಳಿ ತಾಲೂಕಿನಲ್ಲಿ  ನಡೆದಿದೆ.

ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾರೆ.‌ ಅಪಹರಣದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನರಸಿಪುರ ಗ್ರಾಮದ ಕಾರ್ತಿಕ್ ಜೊತೆ ಅನುಂಧತಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಗಂಡು ಮಗು ಇದೆ. ಆರು ತಿಂಗಳ ಹಿಂದೆ ಪತಿ ಕಾರ್ತಿಕ್ ಮತ್ತು ಕುಟುಂಬಸ್ಥರು ಅನುಂಧತಿ ಮತ್ತು ಮಗನನ್ನು ಮನೆಯಿಂದ ಹೊರ ಹಾಕಿದ್ದರು. ಇದರಿಂದ ಅನುಂಧತಿ ತನ್ನ ಮಗನೊಂದಿಗೆ ಹೊನ್ನಾಳಿಯ ದಿಡಗೂರು ಗ್ರಾಮದ ಅತ್ತೆ ಮನೆ ಸೇರಿದ್ದರು. ಪತಿ ಕಾರ್ತಿಕ್ ಮತ್ತು ಕುಟುಂಬಸ್ಥರು ಮನೆಗೆ ನುಗ್ಗಿ ಅನುಂಧತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅನುಂಧತಿಯನ್ನು ಆಕೆಯ ಪತಿ ಕಾರ್ತಿಕ್, ಅವರ ಅಕ್ಕ ಮತ್ತು ಭಾಮೈದ, ಅವರ ತಂಗಿ ಬಂದು ನಮಗೆ ಹೊಡೆದು ಕರೆದುಕೊಂಡು ಹೋಗಿದ್ದಾರೆ. ನಮ್ಮ ಮೇಲೂ ಹಲ್ಲೆ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದೇವೆ ಎಂದು ಅನುಂಧತಿಯ ಸಹೋದರ ಪ್ರಮೋದ್ ಹೇಳಿದರು.

ಪ್ರಕರಣದ ಬಗ್ಗೆ  ಹೊನ್ನಾಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, “ದಂಪತಿ ನಡುವೆ ಕೆಲ ವರ್ಷಗಳಿಂದ ಜಗಳ ನಡೆಯುತ್ತಿತ್ತು. ಸಾಕಷ್ಟು ಬಾರಿ ಮನೆಗೆ ಬರುವಂತೆ ಕರೆದರೂ ಬಾರದ ಹಿನ್ನೆಲೆಯಲ್ಲಿ ಪತ್ನಿ ಕಾರ್ತಿಕ್ ಹಾಗೂ ಕುಟುಂಬಸ್ಥರು ಅನುಂಧತಿ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ‌. ಇದು ಅಪಹರಣ ಅಲ್ಲವೇ ಅಲ್ಲ. ಈಗಾಗಲೇ ಎಫ್ಐಆರ್ ದಾಖಲಾಗಿದೆ. ತನಿಖೆ ನಡೆಸುತ್ತಿದ್ದೇವೆ. ದಂಪತಿಗಳಿಬ್ಬರು ಠಾಣೆಗೆ ಬರಲು ಒಪ್ಪಿದ್ದಾರೆ ಕರೆಸಿ ಸಂಧಾನ ಮಾಡುವ ಕೆಲಸ ಮಾಡಲಿದ್ದೇವೆ” ಎಂದು ತಿಳಿಸಿದರು.

Related Articles

Back to top button