ಸ್ನೇಹಿತನನ್ನು ಕೊಂದು ಮೃತದೇಹ ಕಾಡಿನಲ್ಲಿ ಬಿಸಾಡಿ ಬಂದಿದ್ದ ಕಿಲ್ಲರ್ ಲೇಡಿ:ಮೂವರ ಬಂಧನ

Views: 234
ಕನ್ನಡ ಕರಾವಳಿ ಸುದ್ದಿ: ನಾಪತ್ತೆಯಾಗಿದ್ದ ಕೊಡಗಿನ ಸೋಮವಾರಪೇಟೆಯ ನಿವಾಸಿ ಸಂಪತ್ ನಾಯರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದ ಬಿ.ಎಂ ಕಿರಣ್ (44), ಆತನ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರೂ ಕೊಲೆಯಾದ ಸಂಪತ್ ಸ್ನೇಹಿತರೇ ಆಗಿದ್ದರು.
ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲು ಆರೋಪಿ ಸಂಗೀತಾ ಸಂಚು ರೂಪಿಸಿದ್ದಳು. ಅದಕ್ಕಾಗಿ ಮೇ 9ರಂದು ಸಂಪತ್ ನಾಯರ್‌ನನ್ನು ಸೋಮವಾರಪೇಟೆಯ ಹಾನಗಲ್‌ನಲ್ಲಿರುವ ತನ್ನ ಮನೆಗೆ ಬರಲು ಹೇಳಿದ್ದಳು.ಸಾಲದ ಹಣ ವಾಪಸ್ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಳು. ಸಂಪತ್ ಮನೆಗೆ ಬಂದ ಮೇಲೆ ಸಂಗೀತಾಳ ಗಂಡ ಕಿರಣ್ ಹಾಗೂ ಸ್ನೇಹಿತ ಗಣಪತಿ ಮೂವರು ಸೇರಿ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಮೃತ ದೇಹವನ್ನ ಸಂಪತ್ ನಾಯರ್ ತಂದಿದ್ದ ಕಾರಿನಲ್ಲೇ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಬಿಸಾಡಿದ್ದಾರೆ. ಬಳಿಕ ಕಲ್ಲಳ್ಳಿ ಬಳಿ ಆತನ ಕಾರು ನಿಲ್ಲಿಸಿ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಿರಣ್‌ನನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು. ಇನ್ನೂ ಮೇ 17ರಂದು ಬೆಳ್ತಂಗಡಿಯ ಅಂಗಡಿಯಲ್ಲಿ ಮತ್ತೊಬ್ಬ ಆರೋಪಿ ಗಣಪತಿ ಹಾಗೂ ಮೇ 18ರಂದು ಆರೋಪಿ ಸಂಗೀತಾಳನ್ನು ಸೋಮವಾರ ಪೇಟೆಯಲ್ಲಿ ಬಂಧಿಸಲಾಯಿತು.
ಅನೈತಿಕ ಸಂಬಂಧ?
ಕಿರಣ್, ಗಣಪತಿ, ಸಂಪತ್ ನಾಯರ್ ಸ್ನೇಹಿತರಾಗಿದ್ದು, ಮೂವರು, ಹಣಕಾಸು ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಆದ್ರೆ ಸಂಪತ್ ಕಿರಣ್ ಪತ್ನಿ ಸಂಗೀತಾಳ ವಿಡಿಯೋ ಒಂದನ್ನು ಇಟ್ಟುಕೊಂಡು ಆಗಾಗ್ಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದ. ಅಲ್ಲದೇ ಈ ಹಿಂದೆ ಸಂಗೀತಾ ಕೆಲವು ತಿಂಗಳ ಕಾಲ ಸಂಪತ್‌ನ ಜೊತೆಗಿದ್ದಳು. ಪುನಃ ತನ್ನ ಗಂಡ ಕಿರಣ್‌ಜೊತೆಗೆ ಬಾಳ್ವೆ ನಡೆಸುತ್ತಿದ್ದಳು. ಆಕೆ ಸಂಪತ್‌ನೊಂದಿಗೆ ಇದ್ದ ಸಂದರ್ಭದಲ್ಲಿ 20 ಲಕ್ಷ ಹಣ ಪಡೆದುಕೊಂಡಿದ್ದಳು. ಅದನ್ನು ವಾಪಸ್ ನೀಡದೇ ಇದ್ದಿದ್ದಕ್ಕೆ ಸಂಪತ್ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಕಿರಣ್, ಸಂಗೀತಾ ಆಕೆಯ ಸಂಬಂಧಿ ಗಣಪತಿಯೊಂದಿಗೆ ಸೇರಿ ಸ್ಕೆಚ್ ಹಾಕಿ, ಸಂಪತ್‌ನನ್ನ ಮುಗಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ವಿಚಾರಣೆ ನಡೆಸಿದ ಬಳಿಕ ತಪ್ಪೊಪ್ಪಿಕೊಂಡಿದ್ದಾರೆ ಎಂದು ಘಟನೆಯ ವಿವರಣೆ ನೀಡಿದ್ದಾರೆ. ಈ ಸಂಬಂಧ ಕೃತ್ಯಕ್ಕೆ ಬಳಸಲಾದ ದೊಣ್ಣೆ, ಕತ್ತಿ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ