ಜನಮನ

ಸುಂದರ ಮರವಂತೆ ಸ್ವಚ್ಛ ಮರವಂತೆ ಅಭಿಯಾನಕ್ಕೆ ಚಾಲನೆ

Views: 30

ಕನ್ನಡ ಕರಾವಳಿ ಸುದ್ದಿ: ಮರವಂತೆ ನದಿ ಕಡಲಿನಿಂದ ಆವೃತವಾದ ಪ್ರಕೃತಿ ರಮ್ಯ ಪ್ರವಾಸಿ ತಾಣ. ಇದನ್ನು ಇನ್ನಷ್ಟು ಸುಂದರ ಮತ್ತು ಸ್ವಚ್ಛವಾಗಿ ಮಾರ್ಪಡಿಸಲು ಗ್ರಾಮ ಪಂಚಾಯಿತಿ ರೂಪಿಸಿದ ಯೋಜನೆಗೆ ಮಂಗಳವಾರ ಚಾಲನೆ ನೀಡಲಾಯಿತು. 

ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಪಂಚಾಯಿತಿ ಅಧ್ಯಕ್ಷ ನಾಗರಾಜ ಪಟಕಾರ್ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಸದಸ್ಯರ, ಸಂಘ ಸಂಸ್ಥೆಗಳ ಪ್ರಮುಖರ, ಇಲಾಖೆಗಳ ಅಧಿಕಾರಿಗಳ, ಸಮುದಾಯದ ಹಿರಿಯರ ಸಭೆಯಲ್ಲಿ ಯೋಜನೆಯ ವಿವರಗಳನ್ನು ಕೂಲಂಕಷವಾಗಿ ಚರ್ಚಿಸಲಾಯಿತು. 

ಗ್ರಾಮ ಪಂಚಾಯಿತಿಯು ಕ್ರಮಬದ್ಧವಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದರೂ ಜನರು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಯ ಇಕ್ಕಡೆಗಳಲ್ಲಿ ಬಳಸಿ ಎಸೆಯುವ ಪ್ಲಾಸ್ಟಿಕ್ ಮತ್ತು ಇತರ ಕಸಗಳಿಂದ ಊರಿನ ಸೌಂದರ್ಯ ಕೆಡುತ್ತಿದೆ. ಜನರಲ್ಲಿ ಬೇರೂರಿರುವ ಈ ಪ್ರವೃತ್ತಿಯನ್ನು ವ್ಯಾಪಕವಾಗಿ ಅರಿವು ಮೂಡಿಸುವ ಮೂಲಕ ಶಾಶ್ವತವಾಗಿ ತೊಡೆದುಹಾಕಲು ಪಂಚಾಯಿತಿ ರೂಪಿಸಿದ ಯೋಜನೆಗೆ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಯಿತು. ಭಾಗವಹಿಸಿದವರು ನೀಡಿದ ಸಲಹೆಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು. 

ಮುಂದಿನ ಆರು ತಿಂಗಳ ಮೊದಲ ಹಂತದಲ್ಲಿ ಜನರು ಬಳಸಿದ ವಸ್ತುಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ತಮ್ಮ ಮನೆಗೆ ಒಯ್ದು ಘನದ್ರವ ತ್ಯಾಜ್ಯ ಘಟಕಕ್ಕೆ ನೀಡಲು ಇರಿಸಿಕೊಂಡಿರುವ ಕಸದ ಬುಟ್ಟಿಗೆ ಹಾಕುವ ಮೂಲಕ, ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುವ ಪ್ರವೃತ್ತಿಯನ್ನು ತ್ಯಜಿಸುವಂತೆ ಅವರಲ್ಲಿ ಶಾಶ್ವತ ಪರಿವರ್ತನೆಯನ್ನು ಸಾಧಿಸಲು ಜನರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಅದಕ್ಕಾಗಿ ಕರಪತ್ರ, ಪ್ರಚಾರ ಫಲಕಗಳ ಬಳಕೆ, ನಾಗರಿಕರ ಗುಂಪುಗಳೊಂದಿಗೆ ಸಂವಹನ, ಶಾಲಾ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಮಾರ್ಗದರ್ಶನ, ಕಡಲತೀರಕ್ಕೆ ಬಂದು ಬೀಳುವ ಘನತ್ಯಾಜ್ಯವನ್ನು ಅವಧಿಬದ್ಧವಾಗಿ ಸಂಗ್ರಹಿಸಿ ಪಂಚಾಯಿತಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸಲು ಯುವನಿವಾಸಿಗಳ ಪಡೆ ರಚನೆ ಮತ್ತು ಅವರಿಗೆ ಪ್ರೇರಣೆ, ಮಾರ್ಗದರ್ಶನ ನೀಡಿಕೆ, ಗ್ರಾಮದ ವಸತಿ ಪ್ರದೇಶಗಳನ್ನು ವಿಭಜಿಸಿ, ಪ್ರತಿ ವಿಭಾಗದ ಜನರಿಗೆ ನಿಯತವಾಗಿ ಮಾರ್ಗದರ್ಶನ ನೀಡಲು ಸ್ವಯಂಸೇವಕರಿಗೆ ಹೊಣೆ ನೀಡಿ, ಎಲ್ಲ ವಸತಿ ಪ್ರದೇಶಗಳನ್ನು ಕಸಮುಕ್ತಗೊಳಿಸಲು ಮತ್ತು ಅದರ ನಿರಂತರತೆಯನ್ನು ಕಾಪಾಡಲು ಕ್ರಮ, ಅಂಗಡಿಗಳ ಹೊರಗೆ ಕಸದಬುಟ್ಟಿ ಇರಿಸುವುದನ್ನು ಮತ್ತು ಗ್ರಾಹಕರು ಸ್ಥಳದಲ್ಲಿಯೇ ಬಳಸುವ ವಸ್ತುಗಳಿಂದ ಉತ್ಪನ್ನವಾಗುವ ಕಸವನ್ನು ಅದಕ್ಕೆ ಹಾಕುವುದನ್ನು ಕಡ್ಡಾಯಗೊಳಿಸುವ ಮತ್ತು ಗ್ರಾಮದ ಯಾವುದೇ ಭಾಗದಲ್ಲಿ ಹೊರಗಿನವರು ಕಸತಂದು ಎಸೆಯುವುದನ್ನು ತಡೆಯಲು ದಂಡನಾ ಕ್ರಮಗಳನ್ನು ನೈಗೊಳ್ಳಲು ನಿರ್ಧರಿಸಲಾಯಿತು. 

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಶಾಲೆಗಳ ಮುಖ್ಯೋಪಾಧ್ಯಾಯರು, ಆರೋಗ್ಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಸಾಧನಾ ವೇದಿಕೆ, ಸಂಗಮ ಯುವಕ ಮಂಡಲ, ವರಾಹ ದೇವಸ್ಥಾನ, ರಾಮ ಮಂದಿರ, ಸಂಜೀವಿನಿ ಸಂಸ್ಥೆಗಳ ಪ್ರಮುಖರು, ವಿಶ್ವಕರ್ಮ, ಬಿಲ್ಲವ, ದಲಿತ ಸಂಘಟನೆಗಳ ಮುಖಂಡರು, ಕ್ಲೀನ್ ತ್ರಾಸಿ ಮರವಂತೆ, ಕ್ಲೀನ್ ಕಿನಾರಾ, ಸಾಹಸ್ ಸಂಘಟನೆಗಳ ಕಾರ್ಯಕರ್ತರು, ಊರ ನಾಗರಿಕರು ಭಾಗವಹಿಸಿದ್ದರು. 

Related Articles

Back to top button