ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪದಗ್ರಹಣ ಕಾರ್ಯಕ್ರಮ

Views: 120
ಕನ್ನಡ ಕರಾವಳಿ ಸುದ್ದಿ: ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆ (ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್) ಯಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪದಗ್ರಹಣ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಮುಖ್ಯ ಅತಿಥಿಯಾದ ವಂದನಾ ರೈ ಅವರು ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ಹಸ್ತಾಂತರಿಸಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಕರಾತ್ಮಕ ಚಿಂತನೆ ಹಾಗೂ ಹಣದ ಮೌಲ್ಯದ ಬಗ್ಗೆ ಅರಿವನ್ನು ಮೂಡಿಸಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಪೋಷಕರ ಸಹಕಾರವಿದ್ದಾಗ ಶಾಲೆಯು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವೆಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಗಣೇಶ್ ಮೊಗವೀರ ಅವರು ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಾಗ ಅವರ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ,ಆ ಮೂಲಕ ವಿದ್ಯಾರ್ಥಿಗಳು ಶಾಲೆ ಮತ್ತು ಪೋಷಕರಿಗೆ ಹೆಮ್ಮೆ ತರುವ ಕೆಲಸವನ್ನು ಮಾಡುತ್ತಾರೆ ಎಂದರು.
ಜನತಾ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಉದಯ ನಾಯ್ಕ ಅವರು ಶಿಕ್ಷಣದ ಜೊತೆಗೆ ಭಾರತೀಯತೆ,ಶಿಸ್ತು, ಸಂಸ್ಕೃತಿ ,ಸಂಪ್ರದಾಯವನ್ನು ಎಳೆವಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಕರಾವಳಿ ಪ್ರದೇಶದಲ್ಲಿ ಮಾಡಲಾಗುತ್ತಿದೆ ಎಂದರು.
ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಯಾಗಿರುವ ಕುಮಾರಿ ದೀಪಿಕಾ ಆಚಾರ್ಯ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗಲು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಶಿಕ್ಷಕರ ಜೊತೆಗೆ ಸಿಬ್ಬಂದಿ ವರ್ಗದವರು ಸಹಕರಿಸುತ್ತಿದ್ದಾರೆ. ನಾವು ಯಾವುದೇ ಟೀಕೆಗಳಿಗೆ ತಲೆಗೊಡದೆ ಮುಂದುವರಿದಾಗ ವಿದ್ಯಾರ್ಥಿಗಳು ಮತ್ತು ಶಾಲಾಭಿವೃದ್ಧಿ ಸಾಧಿಸಲು ಸಾಧ್ಯವೆಂದರು.
ಈ ಕಾರ್ಯಕ್ರಮದಲ್ಲಿ ನರ್ಸರಿ,ಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.
ಈ ಸಮಾರಂಭದಲ್ಲಿ ಪೋಷಕರು, ಬೋಧಕ/ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಶ್ರೇಯಾ ಸ್ವಾಗತಿಸಿ , ಅನುಷಾ ವಂದಿಸಿ, ಶ್ರೀಮತಿ ಅನಿತಾ ನವೀನ್ ಕಾರ್ಯಕ್ರಮ ನಿರೂಪಿಸಿದರು.