ಉಪಮುಖ್ಯಮಂತ್ರಿ ಹುದ್ದೆಗೆ ಭಾರಿ ಪೈಪೋಟಿ: ಡಿಕೆಶಿ ಸರಕಾರದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?
Views: 27
ಕನ್ನಡ ಕರಾವಳಿ ಸುದ್ದಿ: ಸಂಭವನೀಯ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಕೈಬಿಡುವ ಗಂಭೀರ ಚಿಂತನೆ ಶುರುವಾಗಿದೆ.
ಕೇವಲ ಎರಡು ಡಿಸಿಎಂ ಹುದ್ದೆಗಳಿಗೆ ಮಾಡಲಾಗಿದ್ದ ಪ್ರಸ್ತಾಪ ದಿನ ಕಳೆದಂತೆ ಪೈಪೋಟಿ ಹೆಚ್ಚಾದ ಹಿನ್ನೆಲೆಯಲ್ಲಿ ಆ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಪಕ್ಷದ ವರಿಷ್ಠರು ಆಲೋಚಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಕಿರಿಯರಿಗೆ ಡಿಸಿಎಂ ಹುದ್ದೆಗಳನ್ನು ನೀಡಿದರೆ ಹಿರಿಯರಿಗೂ ನೀಡಬೇಕಾದ ಅನಿವಾರ್ಯ ಎದುರಾಗುತ್ತದೆ. ಜತೆಗೆ ಸಂಪುಟದಲ್ಲಿ ಅವಕಾಶ ಸಿಗದ ಹಿರಿಯರಿಗೆ ಅವಮಾನ ಮಾಡಿದಂತಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆಗಳೇ ಬೇಡ ಎನ್ನುವ ಚರ್ಚೆ ಶುರುವಾಗಿದೆ.
ಇನ್ನು ಡಿಸಿಎಂ ಹುದ್ದೆಗಳಿಗೆ ಕಚ್ಚಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರು ಡಿಸಿಎಂ ಹುದ್ದೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ನಡೆಸಿವೆ. ಉಪಮುಖ್ಯಮಂತ್ರಿ ಹುದ್ದೆಗಳು ಹೆಚ್ಚಾದಷ್ಟು ಆಡಳಿತದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದ್ದು, ಉಪಮುಖ್ಯಮಂತ್ರಿ ಹುದ್ದೆಗೆ ಕಚ್ಚಾಟ ನಡೆಯುತ್ತಿರುವುದು ಪಕ್ಷದ ವರಿಷ್ಠರಿಗೆ ಹೊಸ ತಲೆನೋವು ತಂದಿದ್ದು, ಸದ್ಯಕ್ಕೆ ಇದರ ಸಹವಾಸವೇ ಬೇಡ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೀಗಾಗಿ ಸದ್ಯ ನಿರ್ಧಾರವಾಗಿರುವಂತೆ ಜೂನ್ 3 ನಂದು ಸಂಜೆ 5 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಲಿದ್ದು, ಜತೆಗೆ 10 ರಿಂದ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಾದ ನಂತರ ಸಚಿವರಿಗೆ ಖಾತೆ ಹಂಚಿಕೆ ನಡೆಯಲಿದ್ದು, ಆಗ ತೀರಾ ಅನಿವಾರ್ಯವಾದರೆ ಮಾತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರಿಬ್ಬರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.






