9 ಮಂದಿ ಸಚಿವರೊಂದಿಗೆ ಜೂನ್ 3ರಂದು ಮುಖ್ಯಮಂತ್ರಿ ಆಗಿ ಡಿಕೆಶಿ ಪ್ರಮಾಣ ವಚನ ಸಾಧ್ಯತೆ
Views: 54
ಕನ್ನಡ ಕರಾವಳಿ ಸುದ್ದಿ:ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು 9 ಮಂದಿ ಸಚಿವರೊಂದಿಗೆ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಎಐಸಿಸಿ ವೀಕ್ಷಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪ ಮಾಡಲಿದ್ದಾರೆ. ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್ ಅವರು ಅನುಮೋದಿಸಲಿದ್ದಾರೆ ಎಂದು ಹೇಳಲಾಗಿದೆ.
ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಕ್ರಿಯಾಶೀಲ ಹಾಗೂ ಹಿರಿಯರಾದ 9 ಮಂದಿ ಡಿ.ಕೆ.ಶಿವಕುಮಾರ್‌ರವರ ಸಂಪುಟದಲ್ಲಿ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್, ರೂಪಕಲಾ ಶಶಿಧರ್, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಚಲುವರಾಯಸ್ವಾಮಿ, ಬಿ.ನಾಗೇಂದ್ರ ಸೇರಿದಂತೆ ಯು.ಟಿ.ಖಾದರ್ ಅಥವಾ ಎನ್.ಎ.ಹ್ಯಾರಿಸ್ ಅವರಲ್ಲಿ ಒಬ್ಬರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ರೀಡಾಂಗಣದಲ್ಲಿ ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ತಯಾರಿಗಳಾಗಿತ್ತು. ಆದರೆ ಬುಧವಾರ ಕಾರ್ಯಾಂಗದ ದಿನವಾಗಿರುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಾಗಿ ಜನರಿಗೆ ಸಮಸ್ಯೆಯಾಗಲಿದೆ. ಮೊದಲ ದಿನವೇ ಸರ್ಕಾರಕ್ಕೆ ಜನ ಶಾಪ ಹಾಕುವಂತಾಗಬಾರದು ಎಂಬ ಕಾರಣಕ್ಕೆ ಸರಳವಾಗಿ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆದಿದೆ.
ವಿಧಾನಸೌಧದ ಮೆಟ್ಟಿಲು ಅಥವಾ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಒಂದು ಸಾವಿರ ಜನರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇಂದು ಶಾಸಕಾಂಗ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಇನ್ನಿತರ ಪ್ರಮುಖರನ್ನು ಆಹ್ವಾನಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಯ್ದ ವ್ಯಕ್ತಿಗಳಿಗಷ್ಟೇ ಆಹ್ವಾನ ನೀಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಸಿ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಪ್ರಸಕ್ತ ಸನ್ನೀವೇಶದಲ್ಲಿ ತ್ವರಿತವಾಗಿ ಪ್ರಮಾಣ ವಚನ ಸ್ವೀಕರಿಸಿ, ಸರ್ಕಾರ ರಚಿಸಲಿದ್ದಾರೆ ಎನ್ನಲಾಗಿದೆ.






