ಇತರೆ

ವಿಮಾನ ಅಪಘಾತ: ಮತ್ತೆರಡು ಶವ ಪತ್ತೆ, ತಾಯಿಗೆ ಊಟ ಕೊಡಲು ಹೋಗಿದ್ದ ಬಾಲಕ ಸೇರಿ ಸಾವಿನ ಸಂಖ್ಯೆ 275ಕ್ಕೆ ಏರಿಕೆ

Views: 213

ಕನ್ನಡ ಕರಾವಳಿ ಸುದ್ದಿ: ಏರ್ ಇಂಡಿಯಾ ವಿಮಾನ ಪತನವಾದ ಸ್ಥಳದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. NDRF ಅಧಿಕಾರಿಗಳು ವಿಮಾನದ ಹಿಂಭಾಗದಿಂದ ಮತ್ತೊಂದು ಶವವನ್ನು ಹೊರ ತೆಗೆದಿದ್ದಾರೆ. ವಿಮಾನ ಹಾಸ್ಟೆಲ್ ಮೆಸ್ ಕಟ್ಟಡದ ಮೇಲೆ ಬಿದ್ದಿದ್ದು, ಕಟ್ಟಡದ ಮೇಲ್ಭಾಗದಿಂದ ಶವ ಹೊರಕ್ಕೆ ತೆಗೆಯಲಾಗಿದೆ.

ಸತತ 3ನೇ ದಿನವೂ ಬಿ.ಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಕಟ್ಟಡದಲ್ಲಿ ಶವ ಹೊರ ತೆಗೆಯುವ ಕಾರ್ಯಾಚರಣೆ ಮುಂದುವರಿಸಲಾಗಿದೆ. ವಿಮಾನದ ಹಿಂಭಾಗ, ರೆಕ್ಕೆಯನ್ನು ಇಂದು ಕಟ್ಟಡದಿಂದ ಕೆಳಕ್ಕೆ ಇಳಿಸಲು NSG, DGCA ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ.

ಬಿ.ಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲ್ಭಾಗದಲ್ಲಿ ‌ವಿಮಾನದ ಹಿಂಭಾಗ ಹಾಗೂ ರೆಕ್ಕೆ ಭಾಗಗಳು ಬಿದ್ದಿವೆ. ಮೆಸ್ ಕಟ್ಟಡದ ಮೇಲ್ಭಾಗ ಸಂಪೂರ್ಣ ಜಖಂ ಆಗಿದ್ದು, ವಿಮಾನ ಪತನದ ಸ್ಥಳದಲ್ಲಿ ಡಿಜಿಸಿಎ, NSG ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ದುರಂತದಲ್ಲಿ ಮೃತಪಟ್ಟವರಲ್ಲಿ 241 ಮಂದಿ ವಿಮಾನದ ಪ್ರಯಾಣಿಕರಾದ್ರೆ 33 ಮಂದಿ ಮೆಡಿಕಲ್ ಹಾಸ್ಟೆಲ್‌ನಲ್ಲಿದ್ದವರು ಎನ್ನಲಾಗಿದೆ.

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಈ ಬಾಲಕ ಪ್ರಾಣಬಿಟ್ಟಿದ್ದಾನೆ. ಅಷ್ಟಕ್ಕೂ ಈ ಬಾಲಕ ವಿಮಾನದಲ್ಲಿ ಆಗಲಿ, ಹಾಸೆಲ್ಟ್ನಲ್ಲಿ ಆಗಲಿ ಇರಲಿಲ್ಲ. ಬದಲಿಗೆ ಘಟನೆ ನಡೆದ ಸ್ಥಳದಲ್ಲಿ ಟೀ ಸ್ಟಾಲ್ ಬಳಿ ನಿಂತಿದ್ದ ಅಷ್ಟೇ. ಅಲ್ಲಿ ವಿಮಾನ ಪತನಗೊಂಡಿದೆ. ಅದರಲ್ಲಿ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ. ಮೃತ ಬಾಲಕನ ಹೆಸರು ಆಕಾಶ್. ಬಿಜೆ ಹಾಸ್ಟೆಲ್‌ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿದ್ದರು. ಆಕಾಶ್ ತಾಯಿ ಸೀತಾಗೆ ಊಟ ಕೊಡಲು ಅಂಗಡಿ ಬಳಿ ಹೋಗಿದ್ದ. ವಿಮಾನ ದುರಂತದ ವೇಳೆ ಆಕಾಶ್ ಟೀ ಅಂಗಡಿಯ ಮುಂದೆ ನಿಂತಿದ್ದ. ಏಕಾಏಕಿ ದೊಡ್ಡ ಮಟ್ಟದಲ್ಲಿ ಬೆಂಕಿ ಸ್ಫೋಟಗೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

Related Articles

Back to top button