ಇತರೆ

ನಾಟಕ ವೀಕ್ಷಿಸುತ್ತಿದ್ದ ವೇಳೆ ಹಳೆಯ ಕಮಾನಿನ ಗೋಡೆ ಕುಸಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು 

Views: 11

ಕನ್ನಡ ಕರಾವಳಿ ಸುದ್ದಿ: ನಾಟಕ ವೀಕ್ಷಿಸುತ್ತಿದ್ದ ವೇಳೆ ಹಳೆಯ ಕಮಾನಿನ ಗೋಡೆ ಕುಸಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚೆಡ್ ಗ್ರಾಮದಲ್ಲಿ ನಡೆದಿದೆ.

ಬೈಲ್ ಮರ್ಚೆಡ್ ಗ್ರಾಮದಲ್ಲಿ ಬಯಲು ನಾಟಕದ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮೃತಪಟ್ಟ ಮಕ್ಕಳು ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 7 ಜನರು ಹಳೆಯ ಕಮಾನೊಂದರ ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಇದೇ ಸಂದಂರ್ಭದಲ್ಲಿ ಹಳೆಯ ಕಮಾನಿನ ಗೋಡೆಯೊಂದು ಏಕಾಏಕಿ ಕುಸಿದು ಅವರ ಮೇಲೆ ಬಿದ್ದಿದೆ.

ಕಮಾನು ಬಿದ್ದ ಪರಿಣಾಮವಾಗಿ ದುರಾದೃಷ್ಟವಶಾತ್ ಎಂಟು ವರ್ಷದ ಬಾಲಕ ವಿಶ್ವನಾಥ ರಾಮಲಿಂಗ ಮತ್ತು ಕೇವಲ ಎರಡು ವರ್ಷದ ಪುಟ್ಟ ಮಗು ಸಾನ್ವಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಲಕ್ಷ್ಮಿ (18), ವಿಶಾಲಕ್ಷಿ (25), ಮತ್ತು ಮೂರು ವರ್ಷದ ಯಲ್ಲಮ್ಮ ಅವರ ಕಾಲು ಮುರಿದಿದ್ದು, ತಾಯಿ ಬಸ್ಸಮ್ಮ (45) ಅವರ ಸ್ಥಿತಿ ಚಿಂತಾಜನಕವಾಗಿದ್ದು ಕೋಮಾಗೆ ಜಾರಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!