ಬ್ರಹ್ಮಾವರ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ, ಯುವಕ ಸಾವು
Views: 190
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.
ಶಿಪ್‌ಯಾರ್ಡ್ ಕಾರ್ಮಿಕರೊಬ್ಬರಿಗೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಳಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಕಿಶೋರ್ ಮೊಹಂತಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಉತ್ತರ ಪ್ರದೇಶದ ಕಿಶೋರ್ ಮೊಹಂತಿ ಅವರು ಹಂಗಾರಕಟ್ಟೆ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಸೆಪ್ಟೆಂಬರ್ 27ರ ರಾತ್ರಿ ಹಂಗಾರಕಟ್ಟೆಯಿಂದ ವಾರಂಬಳ್ಳಿ ಗ್ರಾಮದ ಬ್ರಹ್ಮಾವರದಲ್ಲಿರುವ ಬಿರಿಯಾನಿ ಪಾಯಿಂಟ್‌ಗೆ ಊಟಕ್ಕಾಗಿ ಬಂದಿದ್ದರು. ಈ ವೇಳೆ ಕಿಶೋರ್ ಮೊಹಂತಿ ಊಟವನ್ನು ಪಾರ್ಸೆಲ್ ತೆಗೆದುಕೊಂಡು, ಮಾತ್ರೆ ತರಲೆಂದು ರಸ್ತೆ ದಾಟಿ ಮಹೇಶ್ ಆಸ್ಪತ್ರೆ ಕಡೆಗೆ ತೆರಳಿದ್ದರು.
ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಮಾತ್ರೆ ತಂದು ವಾಪಸ್ ಬಿರಿಯಾನಿ ಪಾಯಿಂಟ್ ಕಡೆಗೆ ಬರಲು ಕುಂದಾಪುರ-ಉಡುಪಿ ಏಕಮುಖ ರಸ್ತೆಯನ್ನು ದಾಟುತ್ತಿದ್ದಾಗ, ಕುಂದಾಪುರ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರು ಕಿಶೋರ್ ಮೊಹಂತಿ ಅವರಿಗೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಿಶೋರ್ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಪಕ್ಕದಲ್ಲಿದ್ದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






