ಇತರೆ

ಕಾರು-ಬಸ್‌ ಮುಖಾಮುಖಿ ಡಿಕ್ಕಿ:6 ಮಂದಿ ಸಜೀವ ದಹನ

Views: 60

ಕನ್ನಡ ಕರಾವಳಿ ಸುದ್ದಿ: ಯಾದಗಿರಿ ಜಿಲ್ಲೆಯಲ್ಲಿ ಕಾರು ಮತ್ತು ಖಾಸಗಿ ಬಸ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಆರು ಮಂದಿ ಬೆಂಕಿಗಾಹುತಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಬೆಂಕಿಯ ಜ್ವಾಲೆಯಲ್ಲಿ ಬಲಿಯಾದ ಜೀವಗಳು ಡಿಕ್ಕಿಯ ರಭಸಕ್ಕೆ ಕಾರು ಮತ್ತು ಬಸ್ ಎರಡರಲ್ಲೂ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ. ದುರದೃಷ್ಟವಶಾತ್, ಕಾರಿನಲ್ಲಿದ್ದ ಆರು ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗದೆ ಕಾರಿನ ಒಳಗಡೆಯೇ ಸಜೀವ ದಹನವಾಗಿದ್ದಾರೆ. ಬೆಂಕಿ ಎಷ್ಟು ವೇಗವಾಗಿ ಆವರಿಸಿಕೊಂಡಿತ್ತೆಂದರೆ, ಸ್ಥಳೀಯರು ರಕ್ಷಣೆಗೆ ಧಾವಿಸುವಷ್ಟರಲ್ಲೇ ದೇಹಗಳು ಸುಟ್ಟು ಕರಕಲಾಗಿವೆ.

ಮೃತರನ್ನು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಎಂದು ಗುರುತಿಸಲಾಗಿದೆ.

ಇನ್ನು ಕಾರಿನಲ್ಲಿದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷದ ಮಗು) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಖಾಸಗಿ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೂ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಬೆಂಕಿ ಹರಡುವ ಮೊದಲೇ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!