ರಾಜಕೀಯ

ಚುನಾವಣೆ ರಾಜಕೀಯಕ್ಕೆ ಗುಡ್‌ಬೈ ಹೇಳಿದ ಸಿದ್ದರಾಮಯ್ಯ 

Views: 26

ಕನ್ನಡ ಕರಾವಳಿ ಸುದ್ದಿ: ಸಿದ್ದರಾಮಯ್ಯ ಅವರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಸ್ತಾಂತರವಾದಾಗಿ ನಿಂದಲೂ ರಾಜ್ಯ ರಾಜಕೀಯದಲ್ಲಿ ‘ಸಿದ್ದರಾಮಯ್ಯ ಮುಂದೇನು ಮಾಡಬಹುದು?’ ಎನ್ನುವ ಕುತೂಹಲವಿತ್ತು. ‘ತಾವಿನ್ನು ಚುನಾವಣಾ ರಾಜಕೀಯದಲ್ಲಿರುವುದಿಲ್ಲ’ ಎನ್ನುವ ಘೋಷಣೆಯ ಮೂಲಕ ಈ ಎಲ್ಲ ಕುತೂಹಲಗಳಿಗೆ ಸಿದ್ದರಾಮಯ್ಯ ಅವರು ತೆರೆ ಎಳೆದಿದ್ದಾರೆ.

ಕೆ.ಆ‌ರ್.ಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತಾಡಿರುವ ಸಿದ್ದ ರಾಮಯ್ಯ, ಚುನಾವಣಾ ರಾಜಕೀಯದಲ್ಲಿ ತಾವಿರುವುದಿಲ್ಲ ಎನ್ನುವ ಸಂದೇಶದೊಂದಿಗೆ ಸಕ್ರಿಯ ರಾಜಕಾರಣದಲ್ಲಿ ಉಳಿಯುವೆ ಎನ್ನುವ ಮೂಲಕ ಚುನಾವಣೆಗೆ ಸ್ಪರ್ಧಿಸದಿದ್ದರೂ ರಾಜಕೀಯದಲ್ಲಿನ ‘ಹಿಡಿತ’ವನ್ನು ಸಡಿಲಿಕೆ ಮಾಡುವುದಿಲ್ಲ ಎನ್ನುವ ಸಂದೇಶ ನೀಡಿದ್ದಾರೆ. ಅಲ್ಲದೆ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಪರೋಕ್ಷ ಸಂದೇಶ ರವಾನಿಸುವ ಮೂಲಕ ‘ಅಹಿಂದ’ ಸಂಘಟನೆ ಮಾತುಗಳನ್ನು ಹೇಳಿದ್ದಾರೆಯೇ ಎನ್ನುವ ಪ್ರಶ್ನೆಗಳು ಶುರುವಾಗಿವೆ.

ಸಿದ್ದರಾಮಯ್ಯ ಹೇಳಿದ್ದೇನು?

ಕೆ.ಆ‌ರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರುಣಾ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಅಂದುಕೊಂಡಿದ್ದೇನೆ. ಈ ಹಿಂದೆ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡು ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ. ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ, ಆದರೆ, ಸಕ್ರಿಯ ರಾಜಕಾರಣ ದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಈಗ ನನಗೆ 79 ವರ್ಷ. ನಮ್ಮ ಸರಕಾರದ ಅವಧಿ ಇನ್ನೂ ಒಂದೂವರೆ ವರ್ಷವಿದೆ. ಚುನಾವಣೆ ವೇಳೆಗೆ ನನಗೆ 81-82 ವರ್ಷವಾಗಿರುತ್ತದೆ.

ಈಗಿನಂತೆ ಆರೋಗ್ಯವೂ ಸದೃಢವಾಗಿ ಇರುವುದಿಲ್ಲ. ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆಗ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತದೆ. 1978ರಲ್ಲಿ ನಾನು ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದೆ. ಸೋಲು-ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಆದರೆ ನಂಬಿದ ಸಿದ್ದಾಂತಕ್ಕೆ ವಿರುದ್ಧವಾಗಿ ನಡೆದಿಲ್ಲ, ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ಸಂತೃಪ್ತಿ ನನಗಿದೆ.

ಐದು ದಶಕಗಳ ಕಾಲ ರಾಜ್ಯದ ಜನತೆ ನನ್ನನ್ನು ತಮ್ಮಲ್ಲೊಬ್ಬ ಎಂಬಂತೆ ಕಂಡಿದ್ದಾರೆ. ಪ್ರೀತಿಯಿಂದ ಸಲುಹಿದ್ದಾರೆ. ಈ ಋಣಭಾರ ನನ್ನ ಮೇಲಿದೆ. ಹೀಗಾಗಿ ನನ್ನ ಮುಂದಿನ ಜೀವನ ಸಹ ಜನಸೇವೆಗೆ ಮುಡಿಪಾಗಿರುತ್ತದೆ ಎಂದು ತಮ್ಮ ಇಡೀ ರಾಜಕೀಯ ಜೀವನದ ಮೆಲುಕು ಹಾಕಿದ್ದಾರೆ.

Related Articles

Back to top button
error: Content is protected !!