ಅಕ್ಕನಿಂದಲೇ ತಂಗಿಯನ್ನು ಗ್ಯಾಂಗ್ ಜತೆಗೂಡಿ ಕಿಡ್ನಾಪ್
Views: 18
ಕನ್ನಡ ಕರಾವಳಿ ಸುದ್ದಿ: ಸ್ವಂತ ಅಕ್ಕನೇ ತನ್ನ ತಂಗಿಯನ್ನು ಗ್ಯಾಂಗ್ ಜತೆಗೂಡಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಂಗಿ ಪೃಥ್ವಿ ತನ್ನ ಅಕ್ಕ ಪ್ರಪುಲ್ಲಾ ಬಳಿ 9.5 ಲಕ್ಷ ರು. ಸಾಲ ಪಡೆದಿದ್ದಳು. ಅದರಲ್ಲಿ ಈಗಾಗಲೇ 5 ಲಕ್ಷ ರು.ಹಿಂತಿರುಗಿಸಿದ್ದರೂ, ಇನ್ನೂ 4.5 ಲಕ್ಷ ರೂಪಾಯಿ ಬಾಕಿ ಉಳಿದಿದ್ದ ತಂಗಿ ಯನ್ನು ಗ್ಯಾಂಗ್ ಜತೆಗೂಡಿ ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬಾಕಿ ಹಣಕ್ಕಾಗಿ ಪ್ರಪುಲ್ಲಾ ತನ್ನ ತಂಗಿಯನ್ನೇ ಗ್ಯಾಂಗ್ ಮೂಲಕ ಕಿಡ್ನಾಪ್ ಮಾಡಿಸಿ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ನುಗ್ಗಿದ ಆರೋಪಿಗಳು ದಂಪತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅಪಹರಣ ಮಾಡಿದ ಬಳಿಕ ದಂಪತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಣ ಕೊಡಬೇಕು ಎಂದು ಒತ್ತಾಯಿಸಿದ್ದು, ಹಣ ಕೊಡದಿದ್ದರೆ ಕೊಲೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕಿಡ್ನಾಪ್ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆರೋಪಿಗಳು ಮನೆಗೆ ನುಗ್ಗಿ ದಂಪತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳು ಸಾಕ್ಷಿಯಾಗಿ ಪೊಲೀಸರ ಕೈಗೆ ಸಿಕ್ಕಿವೆ. ಪೃಥ್ವಿ ಕಾಣೆಯಾಗಿರುವ ಮಾಹಿತಿ ತಿಳಿದ ನಂತರ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಕಾರ್ಯಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೆ ಒಳಗಾದ ಪೃಥ್ವಿ ಹಾಗೂ ಆಕೆಯ ಪತಿ ಅಭಿಜಿತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






