ವಾಸ್ತು ಹೇಳುವ ನೆಪದಲ್ಲಿ ಅಸಭ್ಯ ವರ್ತನೆ:ಮಹಿಳೆ ದೂರು, ಗುರೂಜಿ ಪ್ರತಿದೂರು
Views: 44
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ವಿಜಯನಗರದ `ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ನಲ್ಲಿ ವಾಸ್ತು ಹೇಳುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಗರ್ಭಿಣಿ ದೂರು ನೀಡಿದ್ದು, ಹಣಕ್ಕೆ ಬೇಡಿಕೆಯಿಟ್ಟು ಕೇಸ್ ಹಾಕುವುದಾಗಿ ಆಕೆ ಬೆದರಿಸಿದ್ದಾರೆಂದು ಗುರೂಜಿ ಎನ್ನಲಾದ ವ್ಯಕ್ತಿ ಪ್ರತಿ ದೂರು ದಾಖಲಿಸಿದ್ದಾರೆ.
ಏ.4ರಂದು ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್ ಗೆ ಮನೆಯ ವಾಸ್ತು ವಿಚಾರಿಸಲು ಹೋಗಿದ್ದಾಗ ಈ ಘಟನೆ ನಡೆದಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಗುರೂಜಿ ಎನ್ನಲಾದ ಶಾಂತಕುಮಾರ್, ಭರತ್, ಶಾಂತಕುಮಾರ್ ಪತ್ನಿ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದರು ಎಂದು ಸಂತ್ರಸ್ತೆ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವಾಸ್ತು ಹೇಳುವ ನೆಪದಲ್ಲಿ ಶಾಂತಕುಮಾರ್ ಅಸಭ್ಯವಾಗಿ ವರ್ತಿಸಿ ಎದೆ ಮತ್ತು ಹೊಟ್ಟೆಯ ಭಾಗವನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಪ್ರಶ್ನಿಸಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಾಸ್ತು ಸಲಹೆ ನೀಡಲು 15 ಸಾವಿರ ರೂ. ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆಯ ದೂರಿನ ಬೆನ್ನಲ್ಲೇ ಶಾಂತಕುಮಾರ್ ಸಂತ್ರಸ್ತೆ ಹಾಗೂ ಸಹಚರರ ವಿರುದ್ಧ ದೂರು ದಾಖಲಿಸಿದ್ದು, ಸಂತ್ರಸ್ತೆ, ಜಮಾಲ್ ಮತ್ತು ಅಮೃತಲಿಂಗಂ ಎಂಬ ಮೂವರು ವ್ಯಕ್ತಿಗಳು ತಮ್ಮ ಕಚೇರಿಗೆ ಬಂದು ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿದ್ದಾರೆ. ನನ್ನ ಪತ್ನಿ ಬಿಡಿಸಲು ಬಂದಾಗ ಆಕೆಯ ಮೇಲೆಯೂ ಜಮಾಲ್ ಮತ್ತು ಅಮೃತಲಿಂಗಂ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಸಂಘಟನೆ ಹಾಗೂ ಪೊಲೀಸ್ ಇಲಾಖೆಗೆ ಸೇರಿದವರು ಹಾಗೂ ಮಾಧ್ಯಮದವನು ಎಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ. ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ಮೂವರು ಸೇರಿಕೊಂಡು ನನ್ನ ಹಾಗೂ ಹೆಂಡತಿಯನ್ನು ಬಲವಂತವಾಗಿ ಆಟೋದಲ್ಲಿ ಕುಳ್ಳಿರಿಸಿಕೊಂಡು ಜಯನಗರದ ಕಡೆಗೆ ಕರೆದೊಯ್ದಿದ್ದಾರೆ. ಸಂತ್ರಸ್ತೆಯು ನನ್ನ ಬಟ್ಟೆಯನ್ನು ನಾನೇ ಬಿಚ್ಚಿಕೊಂಡು ನಿನ್ನ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ಹಾಕಿ ಮಾನ ಕಳೆಯುತ್ತೇನೆ ಎಂದು ಬೆದರಿಸಿದ್ದಾಳೆ. ದಾರಿಯುದ್ದಕ್ಕೂ ಹಲ್ಲೆ ಮುಂದುವರಿದಾಗ ನಾನು ಕಿರುಚಿಕೊಂಡೆ. ಆಗ ಆಟೋ ನಿಲ್ಲಿಸಿದ್ದು, ತಪ್ಪಿಸಿಕೊಂಡು ಬಂದು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಎರಡೂ ದೂರುಗಳ ಆಧಾರದ ಮೇಲೆ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






