ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಬೀಜದ ಚೆಂಡು ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Views: 56
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಕುಂದಾಪುರ ಅರಣ್ಯ ಇಲಾಖೆಯ ವತಿಯಿಂದ ಬೀಜದ ಚೆಂಡು ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜೂನ್ 6 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ಕುಂದಾಪುರ ವಲಯ ಗಸ್ತು ಅರಣ್ಯಾಧಿಕಾರಿ ಶ್ರೀಮತಿ ಮಾಲತಿ ಎಚ್ ರವರು ಉದ್ಘಾಟಿಸಿ ಮಾತನಾಡುತ್ತಾ, ಮರ-ಗಿಡಗಳ ಮಧ್ಯದಲ್ಲಿ ಸುಂದರವಾಗಿ ತಲೆಯೆತ್ತಿದ ಈ ವಿದ್ಯಾ ಸಂಸ್ಥೆ ಉತ್ತಮ ಪರಿಸರ ಕಾಳಜಿಯನ್ನು ಹೊಂದಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಾಡನ್ನು ನಾಶ ಮಾಡುವ ಬದಲು ಬರಡು ನೆಲದಲ್ಲಿ ಕಾಡನ್ನು ಮರು ಹುಟ್ಟು ಹಾಕುವ ಬೀಜದ ಚೆಂಡು ತಂತ್ರಜ್ಞಾನವನ್ನು ನಾವು ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಈ ಸುಂದರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಹಸುರಿನ ಮಹತ್ವವನ್ನು ತಿಳಿಸಲು ನಮ್ಮ ಸಂಸ್ಥೆಯ ಸುತ್ತಲೂ ಅರಣ್ಯದ ವಾತಾವರಣವನ್ನು ನಿರ್ಮಿಸಿದ್ದೇವೆ. ಪ್ರಕೃತಿಯ ರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದರು.
ಪ್ರಾಂಶುಪಾಲವಾದ ಡಾ. ರೂಪಾ ಶೆಣೈ ಸಭೆಯಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಶಾಂತಾ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ ಅಂತಿಮವಾಗಿ ಸರ್ವರನ್ನು ವಂದಿಸಿದರು.