ವಕ್ವಾಡಿ ಹಳೆಯಮ್ಮ ದೇವಸ್ಥಾನ: ಪ್ರತಿಷ್ಠಾ ವರ್ಧಂತಿ, ‘ಹಳೆಯಮ್ಮ ಸಭಾಭವನ’ ಉದ್ಘಾಟನೆ
Views: 0
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಹಳೆಯಮ್ಮ ಚಿಕ್ಕಮ್ಮ ಮತ್ತು ಹ್ಯಾಗೂಳಿ ಪರಿವಾರ ಹಾಗೂ ನಾಗದೇವರ ದೇವಸ್ಥಾನದ ಪ್ರಥಮ ಪ್ರತಿಷ್ಠಾ ವರ್ಧಂನ್ಯೋತ್ಸವ ಮತ್ತು ಹಳೆಯಮ್ಮ ದೇವಿ ಸಭಾಭವನ ಮೇ 29 ರಂದು ಶುಕ್ರವಾರ ಉದ್ಘಾಟಿಸಲಾಯಿತು.
ಕುಂದಾಪುರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು ಸಭಾಭವನ ಉದ್ಘಾಟಿಸಿ ಮಾತನಾಡುತ್ತಾ, ಊರಿನಲ್ಲಿ ದೇವಸ್ಥಾನ, ಶಾಲೆ ಅಭಿವೃದ್ಧಿಯಾದರೆ ಊರಿನ ಸಮಗ್ರ ಅಭಿವೃದ್ಧಿಯಾಗುತ್ತದೆ. ಶುದ್ಧ ಮನಸ್ಸಿನಿಂದ ಅಭಿವೃದ್ಧಿಗೆ ದೇಣಿಗೆ ನೀಡಿದರೆ ಊರಿನ ಸಮಗ್ರ ಅಭಿವೃದ್ಧಿಯಾಗುತ್ತದೆ.
ಇನ್ನೆರಡು ವರ್ಷದಲ್ಲಿ ದೇವಸ್ಥಾನಕ್ಕೆ ಹೋಗುವ ರಸ್ತೆ ವ್ಯವಸ್ಥೆಯನ್ನು ಹಂತ ಹಂತವಾಗಿ ಮಾಡುತ್ತೇನೆ ಎಂದು ಆಶ್ವಾಸನೆ ನೀಡುವುದರೊಂದಿಗೆ ವಕ್ವಾಡಿಯ ಸಮಸ್ತ ಏಳಿಗೆಗೆ ಸದಾ ಕೈಜೋಡಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಹಳೆಯಮ್ಮ ದೇವಿ ಸಭಾಭವನದ ನಿರ್ಮಾಣಕ್ಕೆ 10 ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿದ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡುತ್ತಾ, ದೇವಿಯ ಕೃಪೆಯೊಂದಿಗೆ ಕ್ಷೇತ್ರದ ಶಾಸಕರು ಮತ್ತು ಊರಿನ ಸದ್ಭಕ್ತರ ಸಹಕಾರದೊಂದಿಗೆ ಅಭಿವೃದ್ಧಿಯಾಗುವುದರೊಂದಿಗೆ ಈ ಜಾಗಕ್ಕೊಂದು ಉತ್ತಮ ಕಳೆ ಬಂದಿದೆ.
ದೈವ, ದೇವರ ಅಭಿವೃದ್ಧಿಯಾದರೆ ಮಾತ್ರ ಈ ಊರಿನ ಸಮಗ್ರ ಅಭಿವೃದ್ಧಿಯಾಗುತ್ತದೆ ಆ ನಿಟ್ಟಿನಲ್ಲಿ ಒಳ್ಳೆಯ ಕೆಲಸಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ಅವರು ಮಾತನಾಡಿ, ಪ್ರತಿಷ್ಠಾ ವರ್ಧಂತಿ ದಿನವೇ ಸಮಗ್ರ ಅಭಿವೃದ್ಧಿ ಮತ್ತು ನೂತನ ಸಭಾಭವನ ನಿರ್ಮಿಸಿದ್ದು ಇಡೀ ತಾಲೂಕಿನ ಇತಿಹಾಸದಲ್ಲಿ ಮೊದಲು ಎಂದರು. ದೇವಸ್ಥಾನದಲ್ಲಿ ಸದಾ ಪೂಜಾ ಕೈಂಕರ್ಯ ನಡೆದರೆ ಇಡೀ ಊರಿಗೆ ಯಶಸ್ಸು. ಉದಾತ್ತ ಧ್ಯೇಯಗಳನ್ನು ಅನಿಸಿದರೆ ಹಿರಿಯರಿಂದ ಮಕ್ಕಳು ಅನುಸರಿಸಿದರೆ ಮುಂದಿನ ಪೀಳಿಗೆಯಲ್ಲಿ ಭಕ್ತಿಯ ಸ್ವರೂಪ ಕಾಣಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಅಕ್ಷತಾ ಮತ್ತು ಶ್ರೀ ಗಿರೀಶ್ ಐತಾಳ್ ಮತ್ತು ಮನೆಯವರು ಕೊಡುಗೆ ನೀಡಿದ ಹಳೆಯಮ್ಮ ದೇವಿಗೆ ಮುಖವಾಡ ಮತ್ತು ಪ್ರಭಾವಳಿಯನ್ನು ವೈಭವದ ಮೆರವಣಿಗೆಯೊಂದಿಗೆ ಶ್ರೀ ದೇವರಿಗೆ ಸಮರ್ಪಿಸಲಾಯಿತು.
ವೇದಿಕೆಯಲ್ಲಿ ಹಳೆಯಮ್ಮ ದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಶೆಟ್ಟಿ, ಹಳೆಯಮ್ಮ ದೇವಿ ಟೆಂಪಲ್ ಟ್ರಸ್ಟ್ ಇದರ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ಬ್ಯಾಂಕ್ ಆಫ್ ಬರೋಡ ಕುಂಭಾಶಿ ಬ್ಯಾಂಕ್ ಶಾಖಾಧಿಕಾರಿ ಬೇಳೂರು ಕರುಣಾಕರ ಶೆಟ್ಟಿ, ಅರ್ಚಕ ಗಿರೀಶ್ ಐತಾಳ್, ಮಾಲಾಡಿ ರಾಜೀವ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ವನಿತಾ ಪ್ರಾರ್ಥಿಸಿದರು. ಆಡಳಿತ ಮೊಕ್ತೇಸರ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಅಕ್ಷತಾ ಗಿರೀಶ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಅರ್ಚಕ ಗಿರೀಶ್ ಐತಾಳ್ ವಂದಿಸಿದರು.












