ರಾಜಕೀಯ

ಲೋಕಸಭಾ ಚುನಾವಣೆ: ಅಧಿಕಾರದಲ್ಲಿರುವ ಪಕ್ಷಕ್ಕೆ ನೀತಿ ಸಂಹಿತೆ,ಯಾವ-ಯಾವ ನಿಯಮಗಳು? ಇಲ್ಲಿದೆ ಮಾಹಿತಿ 

Views: 45

ಬೆಂಗಳೂರು: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.

ರಾಜ್ಯ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದೆ. ಇದರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಮಾಹಿತಿ ನೀಡಲಾಗಿದೆ.

ಯಾವ-ಯಾವ ನಿಯಮಗಳು?: ಅಧಿಕಾರದಲ್ಲಿರುವ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕಾಗಿ ತನ್ನ ಎಂಬ ಉಪಯೋಗಿಸಿದೆ ಎಂಬ ಯಾವುದೇ ದೂರಿಗೆ ಅವಕಾಶವಾಗದಂತೆ ಖಚಿತ ಪಡಿಸಿಕೊಳ್ಳತಕ್ಕದ್ದು ಮತ್ತು ಅದರಲ್ಲಿ ವಿಶೇಷವಾಗಿ ಸಚಿವರಿಗೆ ಈ ನಿಯಮಗಳು ಅನ್ವಯವಾಗುತ್ತದೆ.

* ಸಚಿವರು ಅವರ ಅಧಿಕೃತ ಭೇಟಿಯನ್ನು ಚುನಾವಣಾ ಕಾರ್ಯಗಳೊಂದಿಗೆ ಸೇರಿಸಬಾರದು ಮತ್ತು ಸರ್ಕಾರಿ ಯಂತ್ರ ಅಥವಾ ಸಿಬ್ಬಂದಿಯನ್ನು ಚುನಾವಣಾ ಕೆಲಸಗಳ ಅವಧಿಯಲ್ಲಿ ಉಪಯೋಗಿಸಕೂಡದು. ಅಧಿಕಾರದಲ್ಲಿರುವ ಪಕ್ಷದ ಹಿತಾಸಕ್ತಿಗಾಗಿ ಸರ್ಕಾರಿ ಸಾರಿಗೆ ಮತ್ತು ಸಿಬ್ಬಂದಿಯನ್ನು ಉಪಯೋಗಿಸತಕ್ಕದ್ದಲ್ಲ.

* ಸರ್ಕಾರದ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಅಥವಾ ಸಾರ್ವಜನಿಕ ಉದ್ದಿಮೆಗಳ ಅಥವಾ ಸಹಕಾರಿ ಸಂಸ್ಥೆಗಳ ಅಥವಾ ಸರ್ಕಾರದಿಂದ ಮಂಜೂರಾತಿ ಅಥವಾ ಅನುದಾನ

ಪಡೆಯುತ್ತಿರುವ ಇತರೆ ಯಾವುದೇ ಸಂಸ್ಥೆಗಳ ವಾಹನಗಳನ್ನು ಯಾವುದೇ ರೀತಿಯ ಚುನಾವಣಾ ಪ್ರಚಾರ ಕಾರ್ಯಕ್ಕೆ ಯಾವುದೇ ಸಚಿವರು ಅಥವಾ ಲೋಕಸಭಾ, ವಿಧಾನಸಭಾ ಸದಸ್ಯರು ಸದಸ್ಯರುಗಳು ಅಥವಾ ಅಭ್ಯರ್ಥಿಗಳಿಗೆ ಒದಗಿಸತಕ್ಕದ್ದಲ್ಲ.

* ಆಡಳಿತ ಪಕ್ಷವು ಮೈದಾನ ಮುಂತಾದ ಅಥವಾ ಸಾರ್ವಜನಿಕ ಸ್ಥಳಗಳನ್ನು ಚುನಾವಣಾ ಸಭೆಗಳನ್ನು ನಡೆಸಲು ಏಕಸ್ವಾಮ್ಯಕ್ಕೆ ಒಳಪಡಿಸಿಕೊಳ್ಳಬಾರದು. ಆಡಳಿತ ಪಕ್ಷವು ಯಾವ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಅಂತಹ ಸ್ಥಳವನ್ನು ಮತ್ತು ಸೌಲಭ್ಯಗಳನ್ನು ಉಪಯೋಗಿಸುತ್ತದೆಯೋ ಅದೇ ಷರತ್ತು ಮತ್ತು ನಿಬಂಧನೆಗಳ ಮೇಲೆ ಇತರ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೂ ಉಪಯೋಗಿಸಲು ಅವಕಾಶ ನೀಡಬೇಕು.

* ಅಧಿಕಾರದಲ್ಲಿರುವ ಪಕ್ಷ ಅಥವಾ ಅದರ ಅಭ್ಯರ್ಥಿಗಳು ವಿಶ್ರಾಂತಿ ಗೃಹ, ಡಾಕ್ ಬಂಗ್ಲೆ ಅಥವಾ ಇತರೆ ಸರ್ಕಾರಿ ವಸತಿ ಗೃಹಗಳ ಉಪಯೋಗದ ಏಕಸ್ವಾಮದ್ಯತೆಯನ್ನು ಹೊಂದಿರತಕ್ಕದ್ದಲ್ಲ ಮತ್ತು ಅಂತಹ ವಸತಿ ಗೃಹಗಳನ್ನು ಇತರೆ ಪಕ್ಷಗಳಿಗೆ ಸೇರಿದವರು ಹಾಗೂ ಅವರ ಅಭ್ಯರ್ಥಿಗಳು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಅವಕಾಶ ನೀಡತಕ್ಕದ್ದು. ಆದರೆ ಅದಕ್ಕೆ ಸೇರಿದ ಆವರಣವನ್ನು ಒಳಗೊಂಡಂತೆ ಅಂತಹ ವಿಶ್ರಾಂತಿಗೃಹ, ಡಾಕ್ ಬಂಗ್ಲೆ ಅಥವಾ ವಸತಿಗೃಹವನ್ನು ಚುನಾವಣಾ ಪ್ರಚಾರದ ಉದ್ದೇಶಗಳಿಗಾಗಿ ಪ್ರಚಾರ ಕಛೇರಿಯಾಗಿ ಅಥವಾ ಯಾವುದೇ ಸಾರ್ವಜನಿಕ ಸಭೆಯನ್ನು ನಡೆಸಲು ಉಪಯೋಗಿಸತಕ್ಕದ್ದಲ್ಲ ಅಥವಾ ಅದಕ್ಕೆ ಅನುಮತಿ ನೀಡತಕ್ಕದ್ದಲ್ಲ.

* ಸಾರ್ವಜನಿಕ ನಿಧಿಯಿಂದ ಸಮಾಚಾರ ಪತ್ರಿಕೆಗಳಲ್ಲಿ ಮತ್ತು ಇತರೆ ಮಾಧ್ಯಮಗಳ ಮೂಲಕ ಜಾಹೀರಾತು ನೀಡುವುದನ್ನು ಅಥವಾ ಸರ್ಕಾರಿ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳುವುದು, ಚುನಾವಣಾ ಅವಧಿಯಲ್ಲಿ ರಾಜಕೀಯ ಸಮಾಚಾರದಲ್ಲಿ ಅವರ ಪಕ್ಷದ ಸುದ್ದಿಯನ್ನು ನೀಡುವುದು, ಆಡಳಿತ ಪಕ್ಷದ ಪ್ರಗತಿಯನ್ನು ವೃದ್ಧಿಗೊಳಿಸಿಕೊಳ್ಳುವ ದೃಷ್ಠಿಯಿಂದ ತನ್ನ ಸಾಧನೆಗಳನ್ನು ಪ್ರಕಟಿಸುವುದು. ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ತಡೆಯತಕ್ಕದ್ದು.

* ರಾಜ್ಯ ಚುನಾವಣಾ ಆಯೋಗವು ಚುನಾವಣೆಯನ್ನು ಘೋಷಿಸಿದ ಸಮಯದಿಂದ ಸಚಿವರುಗಳು ಅಥವಾ ಸಂಸತ್ ಸದಸ್ಯರುಗಳು ಅಥವಾ ರಾಜ್ಯ ವಿಧಾನಮಂಡಲದ ಸದಸ್ಯರುಗಳು ಮತ್ತು ಇತರೆ ಪ್ರಾಧಿಕಾರಗಳು ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಅವರ ವಿವೇಚನೆಯಲ್ಲಿರುವ ನಿಧಿಯನ್ನು ಮಂಜೂರು ಮಾಡತಕ್ಕದ್ದಲ್ಲ ಮತ್ತು ಸಂದಾಯ ಮಾಡತಕ್ಕದ್ದಲ್ಲ.

* ಚುನಾವಣೆಯನ್ನು ಘೋಷಿಸುವ ಸಮಯದಿಂದ ಸಚಿವರು ಮತ್ತು ಇತರೆ ಬೇರೆ ಪ್ರಾಧಿಕಾರಗಳು ಯಾವುದೇ ರೂಪದಲ್ಲಿ ಹಣಕಾಸನ್ನು ಮಂಜೂರು ಮಾಡಿದೆಯೆಂದು ಘೋಷಿಸತಕ್ಕದ್ದಲ್ಲ. ಅಥವಾ ಆ ಬಗ್ಗೆ ಆಶ್ವಾಸನೆಯನ್ನು ನೀಡತಕ್ಕದ್ದಲ್ಲ ಅಥವಾ ಯಾವುದೇ ರೀತಿಯ ಯೋಜನೆಗಳ ಅಥವಾ ಕಾರ್ಯಕ್ರಮಗಳ ಅಥವಾ ಮುಂತಾದವುಗಳ ಬಗ್ಗೆ ಆಸ್ತಿಭಾರ ಹಾಕತಕ್ಕದ್ದಲ್ಲ ಅಥವಾ ರಸ್ತೆಗಳ ನಿರ್ಮಾಣದ ಬಗ್ಗೆಯಾಗಲಿ, ಕುಡಿಯುವ ನೀರಿನ ಸೌಕರ್ಯದ ಏರ್ಪಾಡಿನ ಬಗ್ಗೆಯಾಗಲಿ ಯಾವುದೇ ಆಶ್ವಾಸನೆಯನ್ನು ನೀಡತಕ್ಕದ್ದಲ್ಲ.

* ಸರ್ಕಾರ ಅಥವಾ ಸಾರ್ವಜನಿಕ ಸಂಸ್ಥೆಗಳು ಮುಂತಾದವುಗಳಲ್ಲಿ ಯಾವುದೇ ಅಡಹಾಕ್ (Adhoc) (ತಾತ್ಪೂರ್ತಿಕ) ನೇಮಕಾತಿಗಳನ್ನು ಮಾಡತಕ್ಕದ್ದಲ್ಲ. ಸರ್ಕಾರದ ವೆಚ್ಚದಲ್ಲಿ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಯಾವುದೇ ಕಾರ್ಯವನ್ನು ಮಾಡತಕ್ಕದ್ದಲ್ಲ.

* ಸಚಿವರುಗಳು ಅವರ ಅವರ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಯಾಗಿ ಅಥವಾ ಮತದಾರನಾಗಿ ಅಥವಾ ಅಧಿಕೃತ ಏಜೆಂಟನಾಗಿ ಪ್ರವೇಶಿಸುವುದನ್ನು ಹೊರತುಪಡಿಸಿ ಯಾವುದೇ ಮತಗಟ್ಟೆ ಅಥವಾ ಮತ ಎಣಿಕೆಯ ಸ್ಥಳಕ್ಕೆ ಹೋಗತಕ್ಕದ್ದಲ್ಲ.

* ಒಂದು ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಪ್ರದೇಶಕ್ಕೆ ಸಚಿವರು ಪ್ರವಾಸ ಕೈಗೊಂಡಾಗ ಅಂತಹ ಪ್ರವಾಸಗಳನ್ನು ಚುನಾವಣಾ ಪ್ರವಾಸವೆಂದೇ ಪರಿಗಣಿಸತಕ್ಕದ್ದು ಮತ್ತು ಸಚಿವರ ಸುರಕ್ಷತೆಗಾಗಿ ನಿಯೋಜಿಸಲಾದ ಸಿಬ್ಬಂದಿಯನ್ನು ಹೊರತುಪಡಿಸಿ, ಇತರೆ ಸರ್ಕಾರಿ ನೌಕರರು ಅಂತಹ ಸಚಿವರ ಜೊತೆಯಲ್ಲಿ ಹೋಗುವಂತಿಲ್ಲ. ಸರ್ಕಾರ ವಾಹನಗಳನ್ನಾಗಲಿ ಅಥವಾ ಸರ್ಕಾರದ ಇತರೆ ಸೌಲಭ್ಯಗಳನ್ನಾಗಲಿ ಅಂತಹ ಪ್ರವಾಸದ ಸಮಯದಲ್ಲಿ ಒದಗಿಸತಕ್ಕದ್ದಲ್ಲ.

ಈ ಸಂಹಿತೆಯನ್ನು ಉಲ್ಲಂಘಿಸಿದವರ ವಿರುದ್ಧ ಆಯೋಗಕ್ಕೆ ಮಾಹಿತಿಯನ್ನು ನೀಡಿ ಸಕ್ಷಮ ನ್ಯಾಯಾಲಯಗಳಲ್ಲಿ ಅಥವಾ ಪ್ರಾಧಿಕಾರದ ಮುಂದೆ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

Related Articles

Back to top button