ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಹಾರಿದ ವಿದ್ಯಾರ್ಥಿನಿಯರು!

Views: 221
ಕನ್ನಡ ಕರಾವಳಿ ಸುದ್ದಿ:ಬಸ್ ಚಾಲಕ, ಕಂಡಕ್ಟರ್ ಮತ್ತು ಪ್ರಯಾಣಿಕರು ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಮಾಡಿ, ಇಬ್ಬರು ಶಾಲಾ ವಿದ್ಯಾರ್ಥಿನಿಯರು ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದ ಘಟನೆ ಮಧ್ಯಪ್ರದೇಶದಲ್ಲಿ ಸೋಮವಾರ ನಡೆದಿದೆ. ಈ ವೇಳೆ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಬಸ್ಸಿನಲ್ಲಿ ವಿದ್ಯಾರ್ಥಿನಿಯರು ಸೇರಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ನಿಂದಿಸಲು ಆರಂಭಿಸಿ, ದುರುಗುಟ್ಟಿ ನೋಡಿದ್ದಾರೆ. ಇದರಿಂದ ಹೆದರಿದ ವಿದ್ಯಾರ್ಥಿನಿಯರು ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಹಾರಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬಾಲಕಿಯರನ್ನು ದಿಟ್ಟಿಸಿ ನೋಡುವುದರ ಜೊತೆಗೆ ಬಸ್ಸಿನ ಹಿಂಭಾಗದ ಬಾಗಿಲನ್ನು ಮುಚ್ಚಿದ್ದಾರೆ. ಇದರಿಂದ ಅನುಮಾನಗೊಂಡ ಬಾಲಕಿಯರು ತಕ್ಷಣವೇ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಹಾರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯರು ನೀಡಿದ ದೂರಿನ ಮೇರೆಗೆ, ಬಸ್ ಚಾಲಕ, ನಿರ್ವಾಹಕ, ಇನ್ನಿಬ್ಬರು ಪ್ರಯಾಣಿಕರನ್ನು ಭಾರತೀಯ ನ್ಯಾಯ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಮಿಶ್ರಾ ತಿಳಿಸಿದ್ದಾರೆ.