ಯುವಜನ

ಬೆಳ್ತಂಗಡಿ:ಮೆಸೇಜ್ ಮಾಡಿ ಅವಮಾನಿಸಿದ ಶಿಕ್ಷಕ; ನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

Views: 153

ಬೆಳ್ತಂಗಡಿ: ಇಲ್ಲಸಲ್ಲದ ಆರೋಪ ಮಾಡಿ ಚಿತ್ರಕಲಾ ಶಿಕ್ಷಕ ಮೆಸೇಜ್ ಮಾಡಿ ಅವಮಾನಿಸಿದ್ದರಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿ  ತಾಲೂಕಿನಲ್ಲಿ ನಡೆದಿದೆ. ವಿಷ ಸೇವಿಸಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ.

ಧರ್ಮಸ್ಥಳದ ನಿವಾಸಿ, ಖಾಸಗಿ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ (16) ಮೃತಳಾಗಿದ್ದಾಳೆ. ಶಾಲೆಯ ಚಿತ್ರಕಲಾ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮೃತಪಟ್ಟ ವಿದ್ಯಾರ್ಥಿನಿಯ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿನಿಗೆ ಅವಮಾನ ಮಾಡುವ ರೀತಿಯಲ್ಲಿ ಮೆಸೇಜ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಷಯ ತಿಳಿದ ನಂತರ ತಾಯಿಯೊಂದಿಗೆ ವಿದ್ಯಾರ್ಥಿನಿ ಶಾಲೆಗೆ ತೆರಳಿ ವಿಚಾರಿಸಿದ್ದಾಳೆ.

ಬಳಿಕ ಫೆ.7ರಂದು ವಿದ್ಯಾರ್ಥಿನಿ ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಾಣವನ್ನು ಅಂಗಡಿಯಿಂದ ಖರೀದಿ ಮಾಡಿ ತಂದಿದ್ದಾಳೆ. ನಂತರ ಶಾಲೆಯಲ್ಲಿ ಇಲಿ ಪಾಷಾಣ ಸೇವಿಸಿದ್ದಳು. ಇದರಿಂದ ಅಸ್ವಸ್ಥಳಾದ ಆಕೆಯನ್ನು ತಕ್ಷಣ ಶಾಲೆಯ ಶಿಕ್ಷಕರು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ವಿದ್ಯಾರ್ಥಿನಿ ಲಿವರ್ ಮತ್ತು ಕಿಡ್ನಿ ನಿಷ್ಕ್ರಿಯವಾಗಿ ಫೆ.12 ರಂದು ಮುಂಜಾನೆ 5:30 ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ IPC 354D,509,POSO Act 12 ,75JJ Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ಶಿಕ್ಷಕ ರೂಪೇಶ್ ಪೂಜಾರಿಯನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಧರ್ಮಸ್ಥಳ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಆರೋಪಿ ಶಿಕ್ಷಕ ರೂಪೇಶ್ ಪೂಜಾರಿಗೆ ಶಾಲೆಯ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.

Related Articles

Back to top button