ಸಾಮಾಜಿಕ

ಮತ್ತೊಬ್ಬಳ ಜತೆ ವಿವಾಹ, ಮನನೊಂದ ಯುವತಿ ನೇಣಿಗೆ ಶರಣು 

Views: 93

ಚಿತ್ರದುರ್ಗ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಯುವತಿಯೊಬ್ಬಳು ಪ್ರಿಯಕರ ಮೋಸ ಮಾಡಿದನೆಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿತ್ರದುರ್ಗದ ಕೂನಬೇವು ಗ್ರಾಮದಲ್ಲಿ ಘಟನೆ ನಡೆದಿದೆ. ವಿಶಾಲಾಕ್ಷಿ (22) ಮೃತ ದುರ್ದೈವಿ.

ಎಸ್‌ಸಿ ಸಮುದಾಯಕ್ಕೆ ಸೇರಿದ್ದ ವಿಶಾಲಾಕ್ಷಿ, ಎಸ್‌ಟಿ ಸಮುದಾಯದ ತಿಪ್ಪೇಸ್ವಾಮಿ ಎಂಬಾತನನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪೋಷಕರ ವಿರೋಧದ ನಡುವೆ ಕಳೆದ ವರ್ಷ ನಾಯಕನಹಟ್ಟಿ ಜಾತ್ರೆಯಲ್ಲಿ ಇವರಿಬ್ಬರು ಮದುವೆ ಆಗಿದ್ದರು.

ಇದರಿಂದ ಸಿಟ್ಟಾದ ಹುಡುಗನ ಮನೆಯವರು ವಿಶಾಲಾಕ್ಷಿ ಮನೆಯವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಗಲಾಟೆ ಮಾಡಿ ವಿಶಾಲಾಕ್ಷಿ ಕೊರಳಿನಲ್ಲಿದ್ದ ತಾಳಿಯನ್ನು ತಿಪ್ಪೇಸ್ವಾಮಿ ಸಂಬಂಧಿಕರು ಕಿತ್ತು ಹಾಕಿದ್ದಾರೆ. ಯಾರಿದಾದರೂ ಹೇಳಿದರೆ ಹುಷಾರ್ ಎಂದು ಬೆದರಿಸಿದ್ದಾರೆ.

ಈ ನಡುವೆ ಕಳೆದ ನಾಲ್ಕು ದಿನಗಳ ಹಿಂದೆ ತಿಪ್ಪೇಸ್ವಾಮಿಗೆ ಬೇರೆ ಹುಡುಗಿ ಜತೆಗೆ ಮದುವೆಯನ್ನು ಮಾಡಿಸಿದ್ದಾರೆ. ಮದುವೆಯಾದ ಫೋಟೋವನ್ನು ತಿಪ್ಪೇಸ್ವಾಮಿ ಸ್ನೇಹಿತರು ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಹಾಕಿದ್ದಾರೆ. ಇದನ್ನೂ ನೋಡಿದ ವಿಶಾಲಕ್ಷಿ ಆಘಾತಕ್ಕೆ ಒಳಗಾಗಿದ್ದಾಳೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗನೇ ಮೋಸ ಮಾಡಿಬಿಟ್ಟ ಎಂದು ನೊಂದಿದ್ದಾಳೆ. ನನ್ನವನು ನನಗೆ ಮೋಸ ಮಾಡಿದ ಮೇಲೆ ಬದುಕಬಾರದು ಎಂದು ನಿರ್ಧಾರ ಮಾಡಿದ ವಿಶಾಲಾಕ್ಷಿ, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತುರುವನೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇತ್ತ ಮೋಸ ಮಾಡಿದ ಯುವಕನನ್ನು ಬಂಧಿಸುವಂತೆ ಮೃತಳ ಪೋಷಕರು ಒತ್ತಾಯಿಸಿದ್ದಾರೆ. ಡಿಸಿ ಕಚೇರಿ ಮುಂಭಾಗ ಯುವತಿ ಸಂಬಂಧಿಕರು ಪ್ರತಿಭಟಿಸಿದ್ದಾರೆ.

Related Articles

Back to top button