ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಇಸಾಕ್ ಕಾಲಿಗೆ ಹಿರಿಯಡ್ಕದಲ್ಲಿ ಗುಂಡೇಟು

Views: 64
ಕನ್ನಡ ಕರಾವಳಿ ಸುದ್ದಿ:ಸರಣಿ ಅಪಘಾತ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಗರುಡ ಗ್ಯಾಂಗ್ ನ ಆರೋಪಿ ಇಸಾಕ್ ಎಂಬಾತನ ಕಾಲಿಗೆ ಉಡುಪಿಯ ಹಿರಿಯಡ್ಕ ಸಮೀಪದ ಗುಡ್ಡೆಯಂಗಡಿಯಲ್ಲಿ ಪೊಲೀಸರು ಗುಂಡು ಹಾರಿಸಿದ ಘಟನೆ ಬುಧವಾರ ನಡೆಯಿತು.
ಏನಿದು ಪ್ರಕರಣ: ಮಾರ್ಚ್ ಮೊದಲ ವಾರ ಬೆಂಗಳೂರಿನ ನೆಲಮಂಗಲ ಹಾಗೂ ಮಣಿಪಾಲ ಪೊಲೀಸರ ನೇತೃತ್ವದಲ್ಲಿ ಇಸಾಕ್ ಬಂಧನಕ್ಕಾಗಿ ಉಡುಪಿಯಲ್ಲಿ ಕಾರ್ಯಾಚರಣೆ ನಡೆದಿತ್ತು. ಆ ವೇಳೆ ಖಾಸಗಿ ವಾಹನದ ಮೂಲಕ ಉಳಿದ ವಾಹನಗಳಿಗೂ ಅಪಘಾತ ಮಾಡಿ ಪರಾರಿಯಾಗಿದ್ದ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.
ಇಸಾಕ್ ಹಾಗೂ ಈತನ ಸಹಚರರ ಬಂಧನಕ್ಕೆ ಮಣಿಪಾಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್, ಮಲ್ಪೆ ವೃತ್ತ ನಿರೀಕ್ಷಕರು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳ ಜಾಡು ಹಿಡಿದು ನಿನ್ನೆ ಮಧ್ಯಾಹ್ನ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸಾಕ್ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದೆ.
ಇದಕ್ಕೂ ಮುನ್ನ ಎಲ್ಲ ನಾಲ್ವರು ಆರೋಪಿಗಳನ್ನು ಪೊಲೀಸರು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುತ್ತಿದ್ದರು. ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಸುಮಾರು ಸಂಜೆ 7.15ಕ್ಕೆ ಇಸಾಕ್ ತನಗೆ ತುರ್ತಾಗಿ ವಾಂತಿ, ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿ ಕರೆತರುತ್ತಿದ್ದ ವಾಹನ ನಿಲ್ಲಿಸಿದ್ದಾನೆ.ಮೂತ್ರ ವಿಸರ್ಜನೆಯ ನಂತರ ಏಕಾಏಕಿ ಈತನೊಂದಿಗಿದ್ದ ಉಡುಪಿ ಪೊಲೀಸ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ತಳ್ಳಿ, ಕೈಗೆ ಹಾಕಿದ್ದ ಲೀಡಿಂಗ್ ಚೈನ್ ಬಳಸಿ ಬಲವಾಗಿ ಸುತ್ತಿ ಪೊಲೀಸರನ್ನು ತಳ್ಳಿದ್ದಾನೆ. ನಂತರ ಇಬ್ಬರು ಪೊಲೀಸ್ ಉಪನಿರೀಕ್ಷಕರು ಹಿಡಿಯಲು ಯತ್ನಿಸಿದಾಗ ಅವರಿಗೂ ಬಲವಾಗಿ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಎಚ್ಚರಿಕೆ ನೀಡಿದರೂ ಕೇಳದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಹೀಗಿದ್ದರೂ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಇಸಾಕ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇಸಾಕ್ ಹಾಗೂ ಗಾಯಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಉಡುಪಿ ಎಸ್ಪಿ ಅರುಣ್.ಕೆ. ತಿಳಿಸಿದ್ದಾರೆ.