ಯುವಜನ

ಮಗಳು-ಅಳಿಯನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ!

Views: 105

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾದ ಮಗಳು ಮತ್ತು ಅಳಿಯನಿಗೆ ಚಾಕುವಿನಿಂದ ಇರಿದು, ನಂತರ ವ್ಯಕ್ತಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.

ಬದನಗೋಡಿನ ಶಂಕರ ಕಮ್ಮಾರ ಎಂಬವರು ತನ್ನ ಮಗಳು ಮತ್ತು ಅಳಿಯನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದರು. ಹಲ್ಲೆಗೆ ಒಳಗಾದ ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬದನಗೋಡಿನ ಯುವತಿ ಪೋಷಕರಿಗೆ ತಿಳಿಸದೇ ರಂಗಾಪುರದ ಯುವಕನೊಂದಿಗೆ ಕಳೆದ ಮೂರು ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಅನ್ಯ ಜಾತಿಯ ಯುವಕ ಎಂದು ಶಂಕರ ಕಮ್ಮಾರ ವಿರೋಧ ವ್ಯಕ್ತಪಡಿಸಿದ್ದ. ಆದರೆ, ಯುವಕನ ಮನೆಗೆ ಮಗಳನ್ನು ನೋಡುವ ನೆಪದಲ್ಲಿ ಬಂದು, ನಿಮ್ಮ ಮದುವೆಗೆ ಸಾಕ್ಷಿ ಹಾಕಿದವರ ಹೆಸರು ಹೇಳುವಂತೆ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಗಳು ಹೆಸರು ಹೇಳದೇ ಇದ್ದುದಕ್ಕೆ ಹತ್ಯೆಗೆ ಯತ್ನಿಸಿದ್ದಾನೆ. ತಡೆಯಲು ಬಂದ ಅಳಿಯನಿಗೂ ಎದೆ ಹಾಗೂ ಕೈಗೆ ಚಾಕುವಿನಿಂದ ಇರಿದಿದ್ದಾನೆ.

ನಂತರ ಅಲ್ಲಿಂದ ತಪ್ಪಿಸಿಕೊಂಡು ತನ್ನೂರಿಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೂವರೂ ಬದುಕುಳಿದಿದ್ದು, ಇರಿತಕ್ಕೊಳಗಾದ ಇಬ್ಬರೂ ಶಿರಸಿಯ ಪಂಡಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕರ್ ಕಮ್ಮಾರನನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಘಟನೆ ಸಂಬಂಧ ಶಂಕರ್ ಪುತ್ರಿ ನೀಡಿದ ದೂರಿನ ಆಧಾರದಲ್ಲಿ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button