ಮಂಗಳೂರು: ಸಲೂನ್ ಹೆಸರಿನ ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ – ಪೀಠೋಪಕರಣ, ಗಾಜುಗಳು ಧ್ವಂಸ

Views: 143
ಮಂಗಳೂರು: ನಗರದ ಬಿಜೈ ಕೆಎಸ್ಆರ್‌ಟಿಸಿ ಬಳಿ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್‌ಗೆ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ, ಪಾರ್ಲರ್ ಗಾಜು, ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಈ ಸಂಬಂಧ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಯುನಿಸೆಕ್ಸ್ ಸಲೂನ್ ಹೆಸರಿನ ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಸಂಘಟನೆ, ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿ ಪೀಠೋಪಕರಣ ಹಾಗೂ ಗಾಜುಗಳನ್ನು ಧ್ವಂಸ ಮಾಡಿದೆ.
ಘಟನೆ ಹಿನ್ನೆಲೆಯಲ್ಲಿ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರನ್ನು ಸಿಸಿಬಿ ಪೊಲೀಸರು ಅವರ ಮನೆಯಿಂದಲೇ ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದು 2-3 ಗಂಟೆಗಳಲ್ಲೇ ಮಂಗಳೂರಿನ ಕುಡುಪು ಬಳಿಯ ಪ್ರಸಾದ್ ಅತ್ತಾವರ ನಿವಾಸಕ್ಕೆ ತೆರಳಿದ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ: ಈ ಬಗ್ಗೆ ಮಾಹಿತಿ ನೀಡಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ”ಇಂದು ಬೆಳಗ್ಗೆ 11:51ರ ಸುಮಾರಿಗೆ, ಬಿಜೈನ ಆದಿತ್ಯ ಕಾಂಪ್ಲೆಕ್ಸ್ ಬಳಿಯ ಕಲರ್ಸ್ ಯುನಿಸೆಕ್ಸ್ ಸಲೂನ್ಗೆ 9ರಿಂದ 10 ಜನರ ಅಪರಿಚಿತ ವ್ಯಕ್ತಿಗಳ ಗುಂಪು ಅಕ್ರಮವಾಗಿ ಪ್ರವೇಶಿಸಿ ಆಸ್ತಿಗೆ ಹಾನಿ ಉಂಟುಮಾಡಿದೆ. ಸಿಬ್ಬಂದಿ ಮೇಲೆ ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಅವರಿಗೆ ಮತ್ತಷ್ಟು ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ತಿಳಿಸಿದ್ದರು.
”ಈ ಗುಂಪು ಸಲೂನ್ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾನಿಗೊಳಿಸಿದೆ ಎಂದು ವರದಿಯಾಗಿದೆ. ಘಟನೆಯ ಸಮಯದಲ್ಲಿ ಇಬ್ಬರು ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ. ಒಳಗೆ ನುಗ್ಗಿದವರಲ್ಲಿ ಒಬ್ಬರು ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ” ಎಂದು ಆಯುಕ್ತರು ತಿಳಿಸಿದ್ದರು.