ಮಂಗಳೂರು: ನಡುರಾತ್ರಿ ಅಗೋಚರವಾಗಿ ಅಲೆದಾಡುತ್ತಿದ್ದ ಬ್ರಹ್ಮರಾಕ್ಷಸ, ಪ್ರೇತಗಳನ್ನು ಉಚ್ಛಾಟಿಸಿದ ದೈವ!

Views: 261
ಕನ್ನಡ ಕರಾವಳಿ ಸುದ್ದಿ: ಮಂಗಳೂರಿನ ಕೊಟ್ಟಾರ ಬಳಿಯ ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡುರಾತ್ರಿ ಅಗೋಚರವಾಗಿ ಅಲೆದಾಡುತ್ತಿದ್ದ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳನ್ನು ದೈವ ಉಚ್ಛಾಟಿಸಿದ ಅಪರೂಪದ ಘಟನೆ ನಡೆದಿದೆ.
ಈ ದೇವಸ್ಥಾನದ ಆಡಳಿತ ಮಂಡಳಿ ಪ್ರಶ್ನಾಚಿಂತನೆಯಲ್ಲಿ ಜೀರ್ಣೋದ್ಧಾರಕ್ಕೂ ಮುನ್ನ ಅಲ್ಲಿರುವ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳ ಉಚ್ಛಾಟನೆ ಆಗಬೇಕು. ಇಲ್ಲದಿದ್ದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಡೆತಡೆ ಎದುರಾಗಬಹುದು ಎಂಬ ಹೇಳಲಾಗಿತ್ತು. ಅದರಂತೆ ಅಮಾವಾಸ್ಯೆಯ ನಡುರಾತ್ರಿ ದಾರ್ಮಿಕ ವಿಧಿ ವಿಧಾನಗಳೊಂದಿಗೆ ಉಚ್ಚಾಟನೆ ನಡೆಯಿತು.
ಅಗೋಚರವಾಗಿ ಆ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದ ಬ್ರಹ್ಮರಾಕ್ಷಸನ ಉಚ್ಛಾಟನೆಯ ವಿಶೇಷ ದೃಶ್ಯವನ್ನು ಕಾಣಲೆಂದೇ ಊರ ಜನತೆ ದೈವಸ್ಥಾನದಲ್ಲಿ ರಾತ್ರಿ 10 ಗಂಟೆಗಿಂತ ಮೊದಲೇ ಸೇರಿದ್ದರು. ಪ್ರತೀ ಮನೆಯವರು ಉಚ್ಛಾಟನೆಗೆ ಅಗತ್ಯವಾಗಿದ್ದ ತೆಂಗಿನಕಾಯಿ, ಕೋಳಿ, ತೆಂಗಿನಗರಿಯ ಸೂಟೆಗಳನ್ನು ಹರಕೆ ಸಲ್ಲಿಸಿದರು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಬಬ್ಬುಸ್ವಾಮಿ ಹಾಗೂ ಗುಳಿಗ ದೈವಗಳ ದರ್ಶನಪಾತ್ರಿಗಳು ಆವೇಶಕ್ಕೆ ನಿಂತರು. ದೈವಾವೇಶದಲ್ಲಿಯೇ ಆ ಪ್ರದೇಶದಲ್ಲಿ ಅಗೋಚರವಾಗಿ ಅಲೆಯುತ್ತಿದ್ದ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳನ್ನು ಆವಾಹಿಸಿ ದೈವಸ್ಥಾನದ ಮುಂಭಾಗ ಇಟ್ಟಿದ್ದ ಬಲಿಗೆ ಹಾಕಿದರು. ಬಲಿಯಲ್ಲಿ ಆ ಕ್ಷುದ್ರಶಕ್ತಿಗಳು ದಿಗ್ಭಂಧನಕ್ಕೊಳಗಾದವು.
ಪರಿಸರದಲ್ಲಿ ಇರೋ ಎಲ್ಲಾ ಪ್ರೇತಾತ್ಮ,ಬ್ರಹ್ಮರಾಕ್ಷಸನನ್ನು ದೈವರಾಜ ಬಬ್ಬುಸ್ವಾಮಿ ಆವಾಹನೆ ಮಾಡಿ ಗುಳಿಗ ದೈವದ ಮೂಲಕ ಕಳುಹಿಸಿ ನದಿ ತೀರದಲ್ಲಿ ಮೋಕ್ಷ ನೀಡಲಾಯಿತು.ಈ ವೇಳೆ ಕೇವಲ ಪುರುಷರು ಮಾತ್ರ ಭಾಗವಹಿಸಲಿದ್ದು,ಯಾರೊಬ್ಬರೂ ಆ ಪರಿಸರದಲ್ಲಿ ಓಡಾಡುವಂತಿಲ್ಲ.
ಸಂಚಾರ ನಿಷೇಧ: ನಡುರಾತ್ರಿ ಕಳೆಯುತ್ತಿದ್ದಂತೆ ದೈವಪಾತ್ರಿ ಈ ಕ್ಷುದ್ರಶಕ್ತಿಗಳಿಗೆ ಮುಕ್ತಿಕೊಡಲು ಆವೇಶದಲ್ಲಿಯೇ ಕೂಳೂರು ನದಿಯತ್ತ ತೆರಳಿದರು. ಜನರೂ ಅದರ ಹಿಂದೆಯೇ ಓಡಿದರು. ಈ ವೇಳೆ ಯಾರೂ ಎದುರು ಸಿಕ್ಕಬಾರದೆಂಬ ನಂಬಿಕೆಯಿದೆ. ಆದ್ದರಿಂದ ಈ ಪ್ರದೇಶದ ಎಲ್ಲ ರಸ್ತೆಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಸಂಚಾರ ನಿಷೇಧಿಸಲಾಗಿತ್ತು. ಈ ಬಗ್ಗೆ ಮುಂಚೆಯೇ ಮುನ್ಸೂಚನೆ ನೀಡಲಾಗಿತ್ತು. ಜನಸಂಚಾರ ಇರದಂತೆ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಯೂ ಸಹಕರಿಸಿತ್ತು.
ರಸ್ತೆಯಲ್ಲಿ ಯಾರೂ ಓಡಾಡದಂತೆ ಮೊದಲೇ ಎಲ್ಲರಿಗೂ ಸೂಚನೆ ನೀಡಲಾಗಿತ್ತು.ಈ ಉಚ್ಚಾಟನೆ ನೋಡುವವರು ರಾತ್ರಿ 10ಗಂಟೆಯೊಳಗೆ ದೈವಸ್ಥಾನಕ್ಕೆ ಬಂದು ಸೇರಬೇಕೆಂದು ಆಡಳಿತ ಮಂಡಳಿ ಸೂಚಿಸಿತ್ತು.