ಭರತ್ ಕುಮ್ಡೇಲು, ತಿಮರೋಡಿ,ಪುತ್ತಿಲ ಸೇರಿದಂತೆ 36 ಮಂದಿಗೆ ಗಡಿಪಾರು ನೋಟಿಸ್

Views: 183
ಕನ್ನಡ ಕರಾವಳಿ ಸುದ್ದಿ: ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಎಸ್ಪಿ ಡಾ. ಅರುಣ್ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ, ಹಿಂದುತ್ವ ಹೋರಾಟಗಾರ ಅರುಣ್ ಕುಮಾರ್ ಪುತ್ತಿಲ, ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಭರತ್ ಕುಮ್ಡೇಲು ಸೇರಿದಂತೆ 36 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಕ್ರಮ ಕೈಗೊಂಡಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ಬಗ್ಗೆ ನೋಟಿಸ್ ನೀಡಲಾಗಿದ್ದು, ಜೂನ್ 6ರಂದು ವಿಚಾರಣೆಗೆ ಹಾಜರಾಗಲು ಈಗಾಗಲೇ ಪೊಲೀಸರು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ, ಬೆಳ್ಳಾರೆ, ವಿಟ್ಲ ಠಾಣಾ ವ್ಯಾಪ್ತಿಯ ರೌಡಿ ಲಿಸ್ಟ್ ಹೊಂದಿರುವ ಹಿಂದೂ ಮತ್ತು ಮುಸ್ಲಿಂ ಸಂಘಟನೆ ಕಾರ್ಯಕರ್ತರು, ಬಿಜೆಪಿಯಲ್ಲಿ ಗುರುತಿಸಿಕೊಂಡವರ ಪಟ್ಟಿ ರೆಡಿ ಮಾಡಿದ್ದಾರೆ. ಇವರೆಲ್ಲರನ್ನೂ ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದ್ದು, ಈ ಪಟ್ಟಿಯಲ್ಲಿರುವ ಒಟ್ಟು 36 ಮಂದಿಯಲ್ಲಿ 13 ಮಂದಿ ಮುಸ್ಲಿಮರಿದ್ದಾರೆ ಎಂದು ತಿಳಿದುಬಂದಿದೆ.
ಎಲ್ಲರಿಗೂ ಆರಂಭದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಅವರುಗಳ ಅಭಿಪ್ರಾಯ ಪಡೆದು ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಗಡಿಪಾರು ಮಾಡಲಾಗುತ್ತದೆ. ಸದ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬರುವ 36 ಮಂದಿಯನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.