ಬ್ರಹ್ಮಾವರ ಕಾರು ಡಿಕ್ಕಿ: ಶಾಲಾ ಬಾಲಕ ಸಾವು; ಸಾರ್ವಜನಿಕರ ಭುಗಿಲೆದ್ದ ಆಕ್ರೋಶ, ಇಂದು ಬೃಹತ್ ಪ್ರತಿಭಟನೆ

Views: 493
ಕನ್ನಡ ಕರಾವಳಿ ಸುದ್ದಿ: ವೇಗವಾಗಿ ಬಂದ ಕಾರೊಂದು ಕುಂದಾಪುರದ ವಕ್ವಾಡಿ ನಿವಾಸಿ ಶಾಲಾ ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಎ.1ರಂದು ಬುಧವಾರ ಬೆಳಿಗ್ಗೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಎಸ್.ಎಮ್.ಎಸ್. ಶಾಲೆಯ 6ನೇ ತರಗತಿಯ ವಂಶಿ ಜಿ ಶೆಟ್ಟಿ(14) ಸಮ್ಮರ್ ಕ್ಯಾಂಪ್ ಗೆ ತೆರಳುವಾಗ ಬಾಲಕ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ಆತನನ್ನು ಮಹೇಶ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ವಕ್ವಾಡಿ ಹೆಬ್ಬಾಗಿಲುಮನೆ ಶ್ರೀಮತಿ ಆಶಾ ಮತ್ತು ಸಂತೋಷ ಶೆಟ್ಟಿ ಅವರ ಪುತ್ರನಾಗಿದ್ದು, ತಂದೆ ದುಬೈನಿಂದ ಎ.2 ರಂದು ಆಗಮಿಸಲಿದ್ದು ಬೆಳಿಗ್ಗೆ ಮೃತ ಬಾಲಕನ ತಾಯಿ ಮನೆಯಾದ ವಕ್ವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ನಿನ್ನೆ ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಯ ಬಳಿ ಬೃಹತ್ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಹೇಶ್ ಆಸ್ಪತ್ರೆ ಜಂಕ್ಷನ್ ಅಪಘಾತ ವಲಯವಾಗಿದ್ದು, ಇಲ್ಲಿ ಈ ಹಿಂದೆ ಹಲವು ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಜಂಕ್ಷನ್‌ನಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಶಾಶ್ವತ ಪರಿಹಾರವನ್ನು ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಎಸ್.ಎಂ.ಎಸ್. ಕಾಲೇಜ್, ಬ್ರಹ್ಮಾವರ ಬಸ್‌ಸ್ಟಾಡ್, ಆಕಾಶವಾಣಿ ಜಂಕ್ಷನ್ ಹಾಗೂ ಮಹೇಶ್ ಆಸ್ಪತ್ರೆ ಬಳಿಯ ಡಿವೈಡರ್ ಅತ್ಯಂತ ಅಪಾಯಕಾರಿ ಸ್ಥಳಗಳಾಗಿವೆ. ಇಲ್ಲಿ ವಿದ್ಯಾರ್ಥಿಗಳು ಸಹಿತ ಸಾವಿರಾರು ಮಂದಿ ಪ್ರಾಣ ಭಯದಿಂದಲೇ ರಾ.ಹೆ. ದಾಟಬೇಕಾದ ಪರಿಸ್ಥಿತಿಯಿದೆ. ಇಲ್ಲಿ ಸರ್ವಿಸ್ ರಸ್ತೆಗಳೂ ಇಲ್ಲದೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇಲ್ಲಿನ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಈ ಭಾಗದಲ್ಲಿ ಸೂಕ್ತ ಸರ್ವೀಸ್ ರಸ್ತೆ, ಓವರ್ ಪಾಸ್‌ಗೆ ಜನರು ಆಗ್ರಹಿಸಿದ್ದಾರೆ.
ಬ್ರಹ್ಮಾವರ ಬಸ್‌ಸ್ಟ್ಯಾಂಡ್ ಹಾಗೂ ಆಕಾಶವಾಣಿ ಜಂಕ್ಷನ್‌ಗಳೂ ಐದು, ಆರು ರಸ್ತೆಗಳು ಸಂಧಿಸುವ ಸ್ಥಳವಾಗಿದ್ದು ಪ್ರತಿಕ್ಷಣವೂ ಆತಂಕ ಪಡುವ ಸ್ಥಿತಿ ಮತ್ತು ಅಪಾಯಕ್ಕೆ ಕಾರಣವಾಗಿದೆ. ಸುಸಜ್ಜಿತ ಫೈ ಓವರ್ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ ವ್ಯಾಪಕವಾಗಿ ವ್ಯಕ್ತವಾಗಿದೆ.
ಇಂದು ಬೃಹತ್ ಪ್ರತಿಭಟನೆ
ಎಸ್.ಎಂ.ಎಸ್. ಕಾಲೇಜು ಬಳಿ ಸರ್ವಿಸ್ ರಸ್ತೆ ಹಾಗೂ ಫೈ ಓವರ್ ನಿರ್ಮಾಣಕ್ಕೆ ಆಗ್ರಹಿಸಿ ಬುಧವಾರ (ಎ. 2) ಬೆಳಗ್ಗೆ 9.30ಕ್ಕೆ ಕಾಲೇಜು ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬ್ರಹ್ಮಾವರದ ಸುಮಾರು 25 ರಿಂದ 35 ಸಂಘಟನೆಗಳು ಬೆಂಬಲ ಸೂಚಿಸಿವೆ.