ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಸುನಿಲ್‌ಕುಮಾರ್ ಮನವಿ

Views: 97
ಕನ್ನಡ ಕರಾವಳಿ ಸುದ್ದಿ,:ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ನಡೆಯುತ್ತಿರುವ ಬೆನ್ನಲ್ಲೆ ಪ್ರಧಾನಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಕಾರ್ಕಳ ಶಾಸಕ ಸುನಿಲ್‌ಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತು ಮೌಖಿಕವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಮನವಿ ಮಾಡಿದ್ದಾರೆ.
ಪಕ್ಷದಲ್ಲಿ ಬಣ ಬಡಿದಾಟ ಮುಂದುವರೆದಿರುವುದು ತಮ್ಮ ನಿರ್ಧಾರಕ್ಕೆ ಕಾರಣವಲ್ಲ. ವೈಯಕ್ತಿಕ ಕಾರಣಗಳಿಂದ ಬಿಡುಗಡೆಗೊಳಿಸುವಂತೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಲ್ವರು ಪ್ರಮುಖರನ್ನು ನಿಯೋಜಿಸಲಾಗುತ್ತದೆ. ಪ್ರಸ್ತುತ ಸುನಿಲ್‌ಕುಮಾರ್,ನಂದೀಶ್‌ರೆಡ್ಡಿ ಹಾಗೂ ಪ್ರಿತಮ್‌ಗೌಡ. ಪಿ. ರಾಜೀವ್ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಬಿ.ವೈ ವಿಜಯೇಂದ್ರ ಹಾಗೂ ಸುನಿಲ್‌ಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲದಿದ್ದರೂ ಇಬ್ಬರ ನಡುವೆ ತಟಸ್ಥ ಸಂಬಂಧ ಇದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಉಸ್ತುವಾರಿ ಜವಾಬ್ದಾರಿ ನಿರ್ವಹಿಸಿದ್ದ ಸುನಿಲ್‌ಕುಮಾರ್ ಬಿ.ವೈ ವಿಜಯೇಂದ್ರ ಅವರ ಜತೆ ಯಾವುದೆ ವಿವಾದಕ್ಕೆ ಅವಕಾಶ ನೀಡದೆ ಜವಾಬ್ದಾರಿ ನಿರ್ವಹಿಸಿದ್ದರು.
ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ಕುರಿತಂತೆ ಸುನಿಲ್‌ಕುಮಾರ್ ಯಾವುದೇ ಬಣದ ಜತೆ ಸೇರಿಲ್ಲ. ಆದರೆ, ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಿಗೊಳಿಸುವಂತೆ ಮನವಿಮಾಡಿರುವುದು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಹೊಸ ತಿರುವು ಪಡೆದುಕೊಂಡಿದೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಬಿ.ವೈ ವಿಜಯೇಂದ್ರ ಮಾಹಿತಿ ರವಾನಿಸಿದ್ದು, ಈ ಸಂಬಂಧ ಪಕ್ಷ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.