ರಾಜಕೀಯ

ಎರಡೂವರೆ ವರ್ಷ ಮುಗಿಸಿರೋ ಸಿಎಂ ಸಂಪುಟ ಸದಸ್ಯರಿಗೆ ದಿಢೀರ್ ಡಿನ್ನರ್ ಕೂಟ…! ಸರ್ಕಾರದಲ್ಲಿ ಬದಲಾವಣೆ ಆಗಲಿದೆಯೇ?

Views: 34

ಕನ್ನಡ ಕರಾವಳಿ ಸುದ್ದಿ: ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸದಸ್ಯರಿಗಾಗಿ ಅ.13ರಂದು ಭೋಜನ ಕೂಟ ಆಯೋಜನೆ ಮಾಡುತ್ತಿದ್ದಾರೆ.‌ ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬಹಳ ದಿನ ಆಗಿತ್ತು ಊಟಕ್ಕೆ ಸೇರಿ. ಹಾಗಾಗಿ ಒಂದು ಊಟ ಆಯೋಜನೆ ಮಾಡಿದ್ದೇವೆ. ಅದು ಬಿಟ್ಟು ಬೇರಾವುದೇ ವಿಚಾರ ಇಲ್ಲ. ಅದಕ್ಕೂ ಈ ಭೋಜನಕೂಟಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.‌ ಆದರೆ, ಸಿಎಂ ದಿಢೀರ್ ಸಚಿವರುಗಳಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದು ಹಲವು ವ್ಯಾಖ್ಯಾನಗಳನ್ನು ಹುಟ್ಟು ಹಾಕಿದೆ.

ನವೆಂಬರ್ ಕ್ರಾಂತಿಯ ಸದ್ದು ಕೇಳಿ ಬರುತ್ತಿರುವ ಮಧ್ಯೆ ಕಾಂಗ್ರೆಸ್ ನಲ್ಲಿ ಡಿನ್ನರ್ ಸಭೆ, ಪ್ರತ್ಯೇಕ ಸಭೆಗಳು ಮತ್ತೆ ಗರಿಗೆದರಿದಂತೆ ಕಾಣುತ್ತಿದೆ. ‌ಬಿಹಾರ ಚುನಾವಣೆ ಬಳಿಕ ಬದಲಾವಣೆ, ಸಂಪುಟ ಪುನಾರಚನೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ. ಎರಡೂವರೆ ವರ್ಷ ಮುಗಿಸಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಆಗಲಿದೆ ಎಂಬ ಕೂಗು ಸದ್ದು ಮಾಡುತ್ತಿದೆ.‌

ಅಕ್ಟೋಬರ್ 13 ರಂದು ತಮ್ಮ ಸಂಪುಟ ಸದಸ್ಯರಿಗೆ ಸಿಎಂ ಡಿನ್ನರ್ ಕೂಟವನ್ನು ಆಯೋಜಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಬಿಹಾರ ಚುನಾವಣೆ ನಂತರ ಸಂಪುಟ ಪುನಾರಚನೆ ಆಗಲಿದ್ದು ಸಂಪುಟದ ಅರ್ಧದಷ್ಟು ಸಚಿವರು ಬದಲಾಗೋ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಸಭೆ ನಡೆಸಿರುವುದು ಮತ್ತೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಬದಲಾವಣೆಯ ಕೂಗಿನ‌ ಮಧ್ಯೆ ಸಚಿವರುಗಳ ಪ್ರತ್ಯೇಕ ಸಭೆ, ಸಿಎಂ ಸಿದ್ದರಾಮಯ್ಯರ ಡಿನ್ನರ್ ಮೀಟ್ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸೋಮವಾರ ಡಿನ್ನರ್ ಸಭೆ ಕರೆದಿರುವ ಬಗ್ಗೆ ಖಚಿತ ಪಡಿಸಿದ್ದು, ಸಂಪುಟ ಪುನರಚನೆ ಸಾಧ್ಯತೆ ಬಗ್ಗೆ ಅಲ್ಲಗಳೆದಿದ್ದಾರೆ‌. ಆದರೆ, ನವೆಂಬರ್ ಕ್ರಾಂತಿ, ಬದಲಾವಣೆಯ ಪುಕಾರುಗಳ ಮಧ್ಯೆ ಈ ಬೆಳವಣಿಗೆಗಳು ಸಾಕಷ್ಟು ಕುತೂಹಲ ಕೆರಳಿಸಿದೆ.

Related Articles

Back to top button