ಪಾರ್ಟ್ ಟೈಂ ಜಾಬ್ ಹೆಸರಲ್ಲಿ ಮೆಸೇಜ್ ಕಳುಹಿಸಿ ಲಕ್ಷ ಲಕ್ಷ ವಂಚನೆ…ಹುಷಾರ್!

Views: 27
ಬೆಂಗಳೂರು: ಪಾರ್ಟ್ ಟೈಂ ಜಾಬ್ ಹೆಸರಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಟೆಲಿಗ್ರಾಂನಲ್ಲಿ ಮೆಸೇಜ್ ಕಳಿಸಿ ಲಕ್ಷ ಲಕ್ಷ ವಂಚನೆ ಮಾಡುತ್ತಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಕೆಲವು ಹೋಟೆಲ್ ಹಾಗೂ ಸ್ಥಳಗಳಿಗೆ ರೇಟಿಂಗ್ಸ್ ಕೊಟ್ಟ ಸ್ಕ್ರೀನ್ ಶಾಟ್ ಕಳಿಸಿದ್ರೆ ಹಣ ಕೊಡ್ತೀವಿ ಎಂದು ವಂಚನೆ ಮಾಡುತ್ತಿದ್ದು, ವ್ಯಕ್ತಿಯೊಬ್ಬ ಇದರಿಂದ ಹದಿಮೂರು ಲಕ್ಷ ಕಳೆದುಕೊಂಡ ಪ್ರಸಂಗ ಬೆಳಕಿಗೆ ಬಂದಿದೆ.
ಸೈಬರ್ ಕಳ್ಳರು ಜಯನಗರದ ಅಭಿಷೇಕ್ ಸಿಂಗ್ ಎಂಬಾತನಿಗೆ ಬರೋಬ್ಬರಿ ಹದಿಮೂರು ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಾರಂಭದಲ್ಲಿ ನಂಬಿಕೆ ಬರಲು ಕಡಿಮೆ ಹಣ ಕೊಟ್ಟು ಕೆಲ ಗ್ರೂಪ್ ಗೆ ನಂಬರ್ ಸೇರಿಸಿ ಪ್ಲಾನ್ ಮಾಡುತ್ತಾರೆ. ಬಳಿಕ ಟೆಲಿಗ್ರಾಂ ಗ್ರೂಪ್ ಗಳಿಗೆ ಸೇರಿಸಿ ಟಾಸ್ಕ್ ಗಳನ್ನು ಕೊಟ್ಟು ಹಣ ಗಳಿಸಬಹುದೆಂದು ನಂಬಿಸುತ್ತಾರೆ. ಹೀಗೆ ನಂಬಿದ್ದ ಅಭಿಷೇಕ್ ಸಿಂಗ್ ಹಂತ ಹಂತವಾಗಿ 13 ಲಕ್ಷ ಹಣ ಹಾಕಿಸಿಕೊಂಡು ವಂಚನೆಗೆ ಒಳಗಾಗಿದ್ದಾರೆ.
ಆಗ್ನೇಯ ವಿಭಾಗ ಸಿಇಎನ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ರೇಟಿಂಗ್ಸ್ ಕೊಟ್ಟ ಟಾಸ್ಕ್ ಮೇಲೆ ಹಣ ಗಳಿಕೆ ಮಾಡಬಹುದು ಎಂದು ನಂಬಿಸಿ ವಂಚನೆ ಮಾಡುತ್ತಿರುವ ಜಾಲವನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಸೈಬರ್ ಕಳ್ಳರ ಪತ್ತೆಗೆ ಕಮಿಷನರ್ ಸೂಚನೆ ನೀಡಿದ್ದಾರೆ.