ಜಲ್ಲಿಕಟ್ಟು ಸ್ಪರ್ಧೆಯಲ್ಲಿ ದುರಂತ: 7 ಜನರು, 2 ಹೋರಿ ಸಾವು,130 ಮಂದಿಗೆ ಗಾಯ

Views: 155
ಕನ್ನಡ ಕರಾವಳಿ ಸುದ್ದಿ: ತಮಿಳುನಾಡಿನಲ್ಲಿ ಕಾನುಂ ಪೊಂಗಲ್ ಅಂಗವಾಗಿ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟು ಕಾರ್ಯಕ್ರಮ ಆಯೋಜಿಸಲಾಗಿತ್ತು.ಮದವೇರಿದ ಹೋರಿ ಮಣಿಸಲು ಯುವಕರು, ವಯಸ್ಕರು ಅಖಾಡಕ್ಕೆ ಇಳಿಯುತ್ತಾರೆ. ಯಾರು ಹೋರಿಯನ್ನು ಮಣಿಸುತ್ತಾರೋ ಅವರಿಗೆ ವಿಶೇಷ ಬಹುಮಾನಗಳನ್ನು ಘೋಷಣೆ ಮಾಡುತ್ತಾರೆ. ಇದಕ್ಕಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೋರಿಗಳನ್ನು ಹಿಡಿಯಲು ಸಾಕಷ್ಟು ಸಂಖ್ಯೆಯಲ್ಲಿ ಯುವಕರು, ವಯಸ್ಕರು ಅಣಿಯಾಗುತ್ತಾರೆ. ಹೋರಿ ಕೋಪದಿಂದ ಗುದ್ದಲು ಬಂದರೂ ಅದರ ಭುಜ ಹಿಡಿದು ಹೋರಾಡಲು ಸ್ಪರ್ಧಿಗಳು ಮುಂದಾಗುತ್ತಾರೆ.
ಹೋರಿಗಳನ್ನು ಅಖಾಡಕ್ಕೆ ಇಳಿದವರು ಹಾಗೂ ಪ್ರೇಕ್ಷಕರು, ಮಾಲೀಕರು ಸೇರಿದಂತೆ 7 ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವಾರು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ಇದರ ಜೊತೆ ಎರಡು ಹೋರಿಗಳು ಕೂಡ ಸಾವನಪ್ಪಿದೆ. ಪುದುಕ್ಕೊಟ್ಟೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಹೋರಿ ಸಾವನ್ನಪ್ಪಿದರೆ, ಶಿವಗಂಗೆಯ ಸಿರವಯಲ್ ಮಂಜುವಿರಟ್ಟು ಎಂಬಲ್ಲಿ ಗೂಳಿ ಮಾಲೀಕ ರಾಜ ಹಾಗೂ ಅವನ ಹೋರಿ ಪ್ರಾಣ ಕಳೆದುಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುವಿರಟ್ಟು ಕಾರ್ಯಕ್ರಮವನ್ನು ಹೊಲದ ಬಯಲು ಪ್ರದೇಶದಲ್ಲಿ ನಡೆಸುವಾಗ ಗೂಳಿ ಓಡಿ ಬಂದಿದ್ದರಿಂದ ಮಾಲೀಕ ಬಾವಿಗೆ ಹಾರಿದ್ದಾನೆ. ಇವನ ಹಿಂದೆಯೇ ಗೂಳಿ ಕೂಡ ಹಾರಿದ್ದರಿಂದ ನೀರಲ್ಲಿ ಮುಳುಗಿ ಜೀವ ಹೋಗಿದೆ. ಈ ಕಾರ್ಯಕ್ರಮದಲ್ಲಿ 150 ಆಕಳುಗಳು ಮತ್ತು 250 ಹೋರಿಗಳು ಇದ್ದವು. ಅಲ್ಲದೇ ಸ್ಪರ್ಧೆಯಲ್ಲಿ ಸುಮಾರು 130 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.ಇವರೆಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.