ಸಾಮಾಜಿಕ

ಗಂಡನ ಮನೆಗೆ ಮಗಳನ್ನು ಕಳುಹಿಸದ ಅತ್ತೆ, ಆತ್ಮಹತ್ಯೆ ಬೆದರಿಕೆಯೊಡ್ಡಿ ಇರಿದು ಕೊಂದ ಅಳಿಯ

Views: 112

ಕನ್ನಡ ಕರಾವಳಿ ಸುದ್ದಿ: ಆರೇಳು ವರ್ಷಗಳ ಕಾಲ ತನ್ನ ಹೆಂಡತಿಯನ್ನು ತವರು ಮನೆಯಿಂದ ಗಂಡನ ಮನೆಗೆ ಕಳುಹಿಸದ ಹಿನ್ನೆಲೆ ಕೋಪಗೊಂಡ ಅಳಿಯನೊಬ್ಬ ಅತ್ತೆಯನ್ನು ಇರಿದು ಕೊಂದ ಭೀಕರ ಘಟನೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನೈದುಪೇಟ್ ಬಳಿ ನಡೆದಿದೆ.

ಕೊಲೆ ಮಾಡಿದ ಆರೋಪಿಯನ್ನು ವೆಂಕಯ್ಯ ಎಂದು ಗುರುತಿಸಲಾಗಿದೆ. ಚೆಂಗಮ್ಮ (47) ಕೊಲೆಯಾದ ಮಹಿಳೆ.

ಅತ್ತೆಯ ಮನೆಯಿದ್ದ ಅಯ್ಯಪ್ಪರೆಡ್ಡಿಪಾಲೆಂ ಗ್ರಾಮದಲ್ಲೇ ಕುಟುಂಬ ಸಮೇತರಾಗಿ ಆರೋಪಿ ವಾಸವಾಗಿದ್ದ. ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದ.10 ವರ್ಷಗಳ ಹಿಂದೆ ಚೆಂಗಮ್ಮ ಅವರ ಪುತ್ರಿ ಸ್ವಾತಿಯನ್ನು ಆರೋಪಿ ಮದುವೆಯಾಗಿದ್ದು, ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಕೆಲ ವರ್ಷಗಳಿಂದ ವೆಂಕಯ್ಯ ಕಾಯಿಲೆಯಿಂದ ಬಳಲುತ್ತಿದ್ದ. ಇದರಿಂದಾಗಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದರಿಂದ ಗಂಡನ ಮನೆ ಬಿಟ್ಟು ಹೆಂಡ್ತಿ ತವರು ಮನೆಗೆ ತೆರಳಿ ತಾಯಿಯ ಜೊತೆ ವಾಸವಾಗಿದ್ದಳು ಎಂದು ಸರ್ಕಲ್ ಇನ್ಸ್ಪೆಕ್ಟರ್ ಬಾಬು ತಿಳಿಸಿದ್ದಾರೆ.

ಪದೇ ಪದೇ ಕರೆದರು ತವರು ಮನೆ ಬಿಟ್ಟು ಗಂಡನ ಮನೆಗೆ ಹೆಂಡತಿ ಬಂದಿರಲಿಲ್ಲ. ಜೊತೆಗೆ ಅತ್ತೆ ಕೂಡ ತನ್ನ ಮಗಳನ್ನು ಕಳುಹಿಸಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಂಗಳವಾರ ತನ್ನ ಹೆಂಡತಿ ಬಳಿ ತೆರಳಿ ಜಗಳ ಮಾಡಿದ್ದ. ಈ ವೇಳೆ ಅತ್ತೆ ಚೆಂಗಮ್ಮ ತನ್ನ ಇನ್ನೋರ್ವ ಮಗಳನ್ನು ಭೇಟಿ ಮಾಡಲು ನೆಲ್ಲೋರ್ಗೆ ತೆರಳಿದ್ದರು. ಆಗ ಆರೋಪಿಯು ತನ್ನ ಅತ್ತೆಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲ ಬಳಿಕ ರಾಜಗೋಪಾಲಪುರಂ ನರ್ಸರಿ ಬಳಿಯ ಸ್ವರ್ಣಮುಖಿ ನದಿ ದಂಡೆಯ ಮೇಲೆ ತಾನು ಕ್ರಿಮಿನಾಶಕ ಸೇವಿಸಿರುವುದಾಗಿ ಅತ್ತೆಗೆ ಅಳಿಯ ತಿಳಿಸಿದ್ದ. ಇದರಿಂದ ಅತ್ತೆ ನೆಲ್ಲೋರ್ನಿಂದ ಘಟನಾ ಸ್ಥಳಕ್ಕೆ ಬಂದಿದ್ದರು. ಬಳಿಕ ಇಬ್ಬರ ಮಧ್ಯೆ ಕೆಲಕಾಳ ವಾಗ್ವಾದ ಉಂಟಾಗಿದೆ. ಕೋಪದಲ್ಲಿ ತಾನು ತಂದಿದ್ದ ಚಾಕುವಿನಿಂದ ಅತ್ತೆಯ ಕತ್ತಿಗೆ ಅಳಿಯ ಇರಿದಿದ್ದಾನೆ. ಇದರಿಂದ ತೀವ್ರ ರಕ್ತ ಸ್ರಾವವಾಗಿ ಚೆಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸಿಪಿಐ ಮಾಹಿತಿ ನೀಡಿದ್ದಾರೆ.

.

Related Articles

Back to top button