ಕೋಟೇಶ್ವರ ವಲಯ ಬ್ರಾಹ್ಮಣ ಪರಿಷತ್ -ವಿಶ್ವ ಮಹಿಳಾ ದಿನಾಚರಣೆ
"ಇಂದು ಕಾನೂನಾತ್ಮಕವಾಗಿಯೂ ಮಹಿಳೆಗೆ ಗರಿಷ್ಠ ಶಕ್ತಿಯಿದೆ. ಆದ್ದರಿಂದ ಮಹಿಳೆಯರು ತಮ್ಮನ್ನು ಪುರುಷರಿಗೆ ಹೋಲಿಸಿಕೊಂಡು ಸ್ಪರ್ಧೆ ನಡೆಸುವ ಅವಶ್ಯಕತೆ ಇಲ್ಲ. ಬದಲಾಗಿ ತಮ್ಮೊಂದಿಗೇ ಸ್ಪರ್ಧೆ ಮಾಡಿ ತಮ್ಮ ಆತ್ಮಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಾಗಿದೆ"--ಚಂದ್ರಿಕಾ ಧನ್ಯ

Views: 92
ಕೋಟೇಶ್ವರ :”ಭಾರತದಲ್ಲಿ ವೇದ ಕಾಲದಿಂದಲೂ ಮಹಿಳೆಯರಿಗೆ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಮಾನಗಳಿತ್ತು. ಜೀವಜಲ ನೀಡುವ ಎಲ್ಲಾ ನದಿಗಳಿಗೂ ಮಹಿಳೆಯ ಹೆಸರೇ ಇವೆ. ಇಂದು ಕಾನೂನಾತ್ಮಕವಾಗಿಯೂ ಮಹಿಳೆಗೆ ಗರಿಷ್ಠ ಶಕ್ತಿಯಿದೆ. ಆದ್ದರಿಂದ ಮಹಿಳೆಯರು ತಮ್ಮನ್ನು ಪುರುಷರಿಗೆ ಹೋಲಿಸಿಕೊಂಡು ಸ್ಪರ್ಧೆ ನಡೆಸುವ ಅವಶ್ಯಕತೆ ಇಲ್ಲ. ಬದಲಾಗಿ ತಮ್ಮೊಂದಿಗೇ ಸ್ಪರ್ಧೆ ಮಾಡಿ ತಮ್ಮ ಆತ್ಮಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಾಗಿದೆ” – ಎಂದು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳ ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಹೇಳಿದರು.
ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಟುಂಬದಲ್ಲಿ ಆರಂಭದಲ್ಲೇ ಸಂಸ್ಕಾರವನ್ನು ಪರಿಚಯಿಸುವವಳು ಮಹಿಳೆಯೇ. ಆಕೆ ಹೇಗೆ ಸಹನಾಶೀಲಳೋ ಹಾಗೆಯೇ ಅನ್ಯಾಯದ ವಿರುದ್ಧ ದುರ್ಗಿಯೂ ಆಗಬಲ್ಲಳು. ಹೀಗೆ ಸಂಸಾರ ಮತ್ತು ಸಮಾಜದಲ್ಲಿ ಪ್ರಮುಖ ಜವಾಬ್ದಾರಿ – ಪಾತ್ರಗಳನ್ನು ವಹಿಸುವ ಮಹಿಳೆಯನ್ನು ಎಂದೂ ಕೀಳೆಂದು ಪರಿಗಣಿಸಿಲ್ಲ ಎಂದು ಅವರು ಮಹಿಳಾ ಶಕ್ತಿಯನ್ನು ಪರಿಚಯಿಸಿದರು.
ಮುಖ್ಯ ಅತಿಥಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್ ಮಾತನಾಡಿ, ವಿಶ್ವದ 52 ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳಾ ಸಮಾನತೆ, ಮಹಿಳಾ ದಿನಾಚರಣೆಯೇ ಇಲ್ಲ. ಅನಾದಿಯಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ ಭಾರತದಲ್ಲಿ ಈ ದಿನಾಚರಣೆಯನ್ನೂ ನಡೆಸಲಾಗುತ್ತಿದೆ. ಇಲ್ಲಿ ಯಾವುದೇ ಮೇಲುಕೀಳೆಂಬ ಧೋರಣೆ ಹೊಂದದೆ ಮಹಿಳೆಯರು ಮತ್ತು ಪುರುಷರ ಸಮರಸವೇ ಸ್ವಸ್ಥ ಸಮಾಜಕ್ಕೆ ಕಾರಣ ಎಂದರು.
ಮುಖ್ಯ ಅತಿಥಿ ಕುಂದಾಪುರ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ ಮಾತನಾಡಿ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸುವುದರಲ್ಲಿ ಕೋಟೇಶ್ವರ ವಲಯದವರು ಮಾದರಿಯಾಗಿದ್ದಾರೆ. ಕುಂದಾಪುರದಲ್ಲಿ ನಡೆದ ವಿಪ್ರ ಕ್ರೀಡಾಕೂಟದಲ್ಲಿ ವಲಯದವರ ಸಾಧನೆ ಶ್ಲಾಘನೀಯ ಎಂದರು.
ಪರಿಷತ್ ಕಾರ್ಯದರ್ಶಿ ರತ್ನಾಕರ ಉಡುಪ, ಪರಿಷತ್ ನ ಹದಿನಾರು ವಲಯಗಳಲ್ಲಿ ಕೋಟೇಶ್ವರ ವಲಯ ಮುಂಚೂಣಿಯಲ್ಲಿದೆ ಎಂದು ಮೆಚ್ಚಿಕೆ ವ್ಯಕ್ತಪಡಿಸಿದರು.
ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಸರ್ವ ರಂಗಗಳಲ್ಲೂ ಮಹಿಳೆಯರು ಸಾಧನೆ ತೋರುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ರಾಜಕೀಯ ಎಲ್ಲೆಡೆ ಯಾವ ಅಸಮಾನತೆಯೂ ಇಲ್ಲ ಎಂದರು. ಪರಿಷತ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ ವಲಯದ ಸದಸ್ಯರನ್ನು ಅಭಿನಂದಿಸಿದರು ಅವರು, ಮುಂದಿನೆಲ್ಲಾ ಕಾರ್ಯಕ್ರಮಗಳಿಗೂ ಒಮ್ಮತದ ಸಹಕಾರ ಕೋರಿದರು.
ವಲಯದ ಬಹುಮುಖ ಸಾಧಕಿ ಮನೋರಮಾ ಅಡಿಗರನ್ನು ಸನ್ಮಾನಿಸಲಾಯಿತು. ಕೃತಜ್ಞತೆಯ ನುಡಿಗಳನ್ನಾಡಿದ ಸನ್ಮಾನಿತೆ ಮನೋರಮಾ ಅಡಿಗ, ಅಭಿವೃದ್ಧಿ ಹೊಂದುವ ತುಡಿತ, ಕಲಿಯುವ ಛಲವಿದ್ದರೆ ಮಹಿಳೆಯರು ಏನನ್ನೂ ಸಾಧಿಸಬಹುದು ಎಂದರು. ತಾನು ತೆಂಗಿನ ಮರ ಏರುವ ತರಬೇತಿ ಪಡೆದು ಇತರ ಆಸಕ್ತರಿಗೂ ಕಲಿಸಿದೆ. ಕೊರೋನಾ ಕಾಲದಲ್ಲಿ ಈ ಉದ್ಯೋಗ ಬಹಳಷ್ಟು ಜನರಿಗೆ ಉಪಯೋಗವಾಯಿತು ಎಂದು ವಿವರಿಸಿದರು.
ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಸಭಾಧ್ಯಕ್ಷತೆ ವಹಿಸಿ, ವಲಯದ ಎಲ್ಲಾ ಸದಸ್ಯರೂ ಸಹಕಾರ ನೀಡುವುದರಿಂದ ಯಾವುದೇ ಕಾರ್ಯಕ್ರಮ ಸಂಘಟಿಸಲು ಸಾಧ್ಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಮಹಿಳೆಯರಿಗಾಗಿ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸೌಮ್ಯ ಉಡುಪ ಪಟ್ಟಿ ವಾಚಿಸಿದರು. ಅರುಂಧತಿ ವೈದ್ಯ, ನಿರ್ಮಲ, ವಸಂತಿ ಮಿತ್ಯಂತ, ಕೆ. ಜಿ. ವೈದ್ಯ, ಕಾರ್ಯದರ್ಶಿ ನಾಗೇಂದ್ರ ಬಿಳಿಯ, ಗೌರವಾಧ್ಯಕ್ಷ ಗಣಪಯ್ಯ ಚಡಗ, ಗೌರವ ಸಲಹೆಗಾರ ವೈ. ಎನ್. ವೆಂಕಟೇಶಮೂರ್ತಿ ಭಟ್, ಪ್ರೊ. ಕೆ ವಿ ಕೆ ಐತಾಳ ಅತಿಥಿಗಳನ್ನು ಗೌರವಿಸಿದರು.
ತಾಲೂಕು ಪರಿಷತ್ ಆಶ್ರಯದಲ್ಲಿ ಕುಂದಾಪುರದಲ್ಲಿ ನಡೆದ ವಿಪ್ರ ಕ್ರಿಕೆಟ್ ಮತ್ತು ವಿಪ್ರ ಮಹಿಳಾ ತ್ರೋ ಬಾಲ್ ಪಂದ್ಯಾಟಗಳಲ್ಲಿ ಉತ್ತಮ ಸಾಧನೆ ಮಾಡಿದ ತಂಡಗಳವರನ್ನು ಗೌರವಿಸಲಾಯಿತು. ಸ್ಪರ್ಧಾ ತೀರ್ಪುಗಾರರಾಗಿ ಸಹಕರಿಸಿದ ವಸಂತಿ ಗಣೇಶ್, ಶಶಿಕಲಾ ಉಡುಪ, ವಸಂತಿ ಉರಾಳ ಮತ್ತು ಸುಪ್ರೀತಾ ಪುರಾಣಿಕರನ್ನು ಗೌರವಿಸಲಾಯಿತು.
ಅನುರಾಧಾ ಭಟ್ ಸಂಗಡಿಗರು ಪ್ರಾರ್ಥಿಸಿದರು. ವಲಯ ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನ ಉಡುಪ ಸ್ವಾಗತಿಸಿದರು. ಗಾಯತ್ರೀ ಅಡಿಗ ಕಾರ್ಯಕ್ರಮ ನಿರೂಪಿಸಿ ಸುಮಾಶ್ರೀ ಧನ್ಯ ವಂದಿಸಿದರು.