ಕೋಟೇಶ್ವರ:ಬೀಜಾಡಿಯ ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ಸಾವು

Views: 345
ಕುಂದಾಪುರ: ಕೋಟೇಶ್ವರದ ಬೀಜಾಡಿಯಲ್ಲಿ ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಬೀಚ್‌ನಲ್ಲಿ ನಡೆದಿದೆ.
ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಇಬ್ಬರು, ಬೀಜಾಡಿ ಬೀಚ್ ಸಮೀಪದ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ಇಬ್ಬರೂ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.
ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಓರ್ವನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದರು.ಆದರೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ದಾರಿ ಮಧ್ಯೆ ಮೃತಪಟ್ಟರು ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇಂತಹ ಘಟನೆ ಹಿಂದೆಯೂ ಆಗಿತ್ತು?
ಆಪ್ತ ಸ್ನೇಹಿತನ ಮದುವೆಗೆ ಬೆಂಗಳೂರಿನಿಂದ ಬಂದ ಯುವಕರ ತಂಡವೊಂದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಇಬ್ಬರು ನೀರುಪಾಲಾದ ದಾರುಣ ಘಟನೆ ಶನಿವಾರ ಬೆಳಿಗ್ಗೆ ಬೀಜಾಡಿ ಬೀಚ್ ನ ಅಮಾಸೆ ಕಡು ಎಂಬಲ್ಲಿ ಸಂಭವಿಸಿದೆ.
ಬೆಂಗಳೂರು ದಾಸರಳ್ಳಿ ಮೂಲದ ಸಂತೋಷ್ (25) ಹಾಗೂ ಕುಂದಾಪುರ ಆನಗಳ್ಳಿ ಮೂಲದ ಅಜಯ್ (25) ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ.
ಬೆಂಗಳೂರಿನ ಐ ಟಿ ಸಂಸ್ಥೆ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಸಹೋದ್ಯೋಗಿ ಅರ್ಜುನ್ ನ ಸಹೋದರಿಯ ಮದುವೆ ಕಾರ್ಯಕ್ರಮಕ್ಕೆಂದು ನಾಲ್ವರು ಸ್ನೇಹಿತರು ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದು ನಿನ್ನೆ ರಾತ್ರಿ ನಡೆದ ಮೆಹಂದಿ ಫಂಕ್ಷನ್ ನಲ್ಲಿ ಭಾಗವಹಿಸಿ ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ಮೂವರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅವರ ಪೈಕಿ ಇಬ್ಬರು ಸಮುದ್ರಪಾಲಾಗಿದ್ದಾರೆ. ಬೆಂಗಳೂರು ಮೂಲದ ಮೋಕ್ಷಿತ್ ಮುಂದೆ ಹೋಗಬೇಡಿ ಎಂದು ಬೊಬ್ಬಿರಿದರೂ ಕೇಳದೇ ನೀರಿನಲ್ಲಿ ಮುಂದೆ ಸಾಗಿರುವ ಸಂತೋಷ್ ಹಾಗೂ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಯುವಕರನ್ನು ಮೋಕ್ಷಿತ್ ರಕ್ಷಿಸಲು ಮುಂದಾದರೂ ಸ್ಥಳೀಯರ ನೆರವಿನಿಂದ ಸಂತೋಷ್ ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಸಾಕಷ್ಟು ಹುಡುಕಾಟದ ನಂತರ ಸಂಜೆ ವೇಳೆ ಅಜಯ್ ನ ಶವವೂ ತೀರದ ಅನತಿ ದೂರದಲ್ಲಿ ಪತ್ತೆಯಾಗಿದ್ದು ಶವಾಗಾರಕ್ಕೆ ಸಾಗಿಸಲಾಗಿದೆ
ಸ್ಥಳಕ್ಕೆ ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ಸ್ಥಳೀಯ ಮುಳುಗು ತಜ್ಞರ ತಂಡ ಆಗಮಿಸಿ ಯುವಕರ ಪತ್ತೆಗಾಗಿ ಶ್ರಮಿಸಿತ್ತು.
ಇತ್ತೀಚೆಗಷ್ಟೇ ತಿಪಟೂರು ಮೂಲದ ಯುವಕನೋರ್ವ ಸ್ನೇಹಿತನ ಮದುವೆಗೆ ಬಂದ ವೇಳೆ ಬೀಜಾಡಿ ಸಮುದ್ರದಲ್ಲಿ ಈಜಲು ಹೋಗಿ ಕಾಣೆಯಾಗಿದ್ದು ,ಆತನ ಶವ ಬರೋಬ್ಬರಿ ಒಂದು ವಾರದ ಬಳಿಕ ಕಾರವಾರ ಸಮೀಪದ ಸಮುದ್ರದಲ್ಲಿ ಪತ್ತೆಯಾಗಿತ್ತು. ಆ ದುರಂತದ ನೆನಪು ಮಾಸುವ ಮುನ್ನವೇ ಇದೀಗ ಮತ್ತೊಂದು ದಾರುಣತೆಗೆ ಬಿಜಾಡಿ ಬೀಚ್ ಸಾಕ್ಷಿಯಾಗಿದೆ