ಇತರೆ

ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿ, ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ

Views: 81

ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ  ಪತಿಯೋರ್ವ ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿ, ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಮಾಳಪ್ಪನಹಟ್ಟಿಯಲ್ಲಿ ಗುರುವಾರ ನಡೆದಿದೆ.‌

ಮೊಹಮ್ಮದ್ ಸುಹೇಲ್ (44) ಎಂಬಾತನೇ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿರುವ ಆರೋಪಿ.

ಘಟನೆಯಲ್ಲಿ, ಆತನ ಪತ್ನಿ ತಾಸಿನಾಬಾನು, ಮಗಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಇವರಿಬ್ಬರೂ ಕಳೆದ 8 ತಿಂಗಳುಗಳಿಂದ ದೂರವಾಗಿ ವಾಸವಿದ್ದರು.

ಚಿತ್ರದುರ್ಗ ನಗರದ ನಗ್ಮಾ ನಾಯ್ಕ್ ಎಂಬವರ ಮನೆಗೆ ಆಕೆಯ ಸಹೋದರಿಯರಾದ ತಾಸಿನಾಬಾನು ಹಾಗೂ ನೇಹಾ ಅವರ ಮಕ್ಕಳೊಂದಿಗೆ ಹಬ್ಬಕ್ಕಾಗಿ ಬೆಂಗಳೂರಿನಿಂದ ಆಗಮಿಸಿದ್ದರು. ಈ ವಿಷಯ ತಿಳಿದು ಏಕಾಏಕಿ ಇವರ ಮನೆಗೆ ನುಗ್ಗಿದ ಸುಹೇಲ್, ಆ್ಯಸಿಡ್ ದಾಳಿ ನಡೆಸಿದ್ದಾನೆ. ಮೊದಲಿಗೆ, ಪತ್ನಿಯ ಮೇಲೆ ಮಚ್ಚಿನಿಂದ‌ ಹಲ್ಲೆ ನಡೆಸಿದ್ದಾನೆ. ಈ ವೇಳೆ, ಜಗಳ ಬಿಡಿಸಲು ಮುಂದಾದ ತಾಸಿನಾಬಾನು ಅವರ ಹಿರಿಯ ಸಹೋದರಿ ನಗ್ಮಾ ನಾಯ್ಕ್‌, ಕಿರಿಯ‌ ಸಹೋದರಿ ನೇಹಾ ಹಾಗೂ ಆಕೆಯ 4 ವರ್ಷದ ಪುತ್ರಿ ಹಾಗೂ ತನ್ನ 11 ವರ್ಷದ ಮಗಳು ಸೇರಿ ಐವರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು‌‌, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡಿರುವ ಪತ್ನಿಯು ಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಆತನೊಂದಿಗೆ ಜೀವನ‌ ಸಾಗಿಸಲು ಹಲವು ಅವಕಾಶ ನೀಡಿದರೂ ಕೂಡ ಪ್ರಯೋಜನ ಆಗಿಲ್ಲ. ಹೀಗಾಗಿ ಅವನ ಹಿಂಸೆ ತಾಳಲಾರದೇ ನಾನು ದೂರವಾಗಿದ್ದು, ಬೆಂಗಳೂರಿನಲ್ಲಿದ್ದೇನೆ. ಆತ ಚಿತ್ರದುರ್ಗದಲ್ಲಿದ್ದು, ಈ ದುಷ್ಕೃತ್ಯ ಎಸಗಿದ್ದಾನೆ. ಆರೋಪಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related Articles

Back to top button
error: Content is protected !!