ಯುವಜನ

ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ, ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಎಫ್‌ಐಆರ್‌ ದಾಖಲಿಸದ ಪೊಲೀಸರು

Views: 75

ಕಳೆದ ಎರಡು ವರ್ಷಗಳಿಂದ ಶಾಲೆಯ ಆವರಣದ ಹೊರಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ 8, 10 ಮತ್ತು 12 ವರ್ಷ ವಯಸ್ಸಿನ ಹುಡುಗಿಯರನ್ನು ಅವರದ್ದೇ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 9 ವರ್ಷದ ಹುಡುಗ ಅಪರಿಚಿತ ವ್ಯಕ್ತಿಯ ಬಳಿಗೆ ಕರೆದೊಯ್ದಿದ್ದಾನೆ. ಜನವರಿ 23 ರಿಂದ ತಿರುವನ್ಮಿಯೂರ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರೂ, ಜನವರಿ 31 ರವರೆಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡಿಲ್ಲ

9 ವರ್ಷದ ಬಾಲಕ ಇತ್ತೀಚೆಗೆ ನಾಲ್ಕನೇ ಹುಡುಗಿಯನ್ನೂ ಅಪರಿಚಿತ ವ್ಯಕ್ತಿ ಬಳಿ ಕರೆದೊಯ್ದಿದ್ದ. ಆದರೆ, ಆಕೆ ಆತನ ಕೈಯಿಂದ ತಪ್ಪಿಸಿಕೊಂಡು ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಮೂವರು ಸಂತ್ರಸ್ತ ಬಾಲಕಿಯರನ್ನು ವಿಚಾರಿಸಿದಾಗ, ಮೊದಲು ಅವರು ಮಾಹಿತಿ ನೀಡಿರಲಿಲ್ಲ. ಬಳಿಕ ನಡೆದಿರುವ ದೌರ್ಜನ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿ ಬಾಲಕಿಯರಿಗೆ ಅವರನ್ನು ಮತ್ತು ಅವರ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕಾರಣಕ್ಕೆ ಅವರು ದೌರ್ಜನ್ಯದ ಬಗ್ಗೆ ಯಾರಿಗೂ ತಿಳಿಸಿಲ್ಲ ಎಂದು ವರದಿ ತಿಳಿಸಿದೆ.

ಒಬ್ಬ ಬಾಲಕಿಯ ಪೋಷಕರು ಜನವರಿ 23 ರಂದು ಪೊಲೀಸರನ್ನು ಸಂಪರ್ಕಿಸಿ ಲಿಖಿತವಾಗಿ ದೂರು ನೀಡಿದ್ದಾರೆ. ಆದರೆ, ದೂರಿನ ಪ್ರತಿಗೆ ಸಹಿ ಹಾಕಲು ಅವರು ಹೆದರುತ್ತಿದ್ದರು. ಬಾಲಕಿಯೊಬ್ಬಳ ಪೋಷಕರು ದೂರು ದಾಖಲಿಸಿದ ಬಳಿಕ, ಬಾಲಕಿಯರನ್ನು ಆರೋಪಿಯ ಬಳಿಗೆ ಕರೆದೊಯ್ಯುತ್ತಿದ್ದ ಒಂಬತ್ತು ವರ್ಷದ ಬಾಲಕ ಮತ್ತು ಆತನ ತಾಯಿಯನ್ನು ತಿರುವನ್ಮಿಯೂರ್ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.

ಈ ನಡುವೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಬಾಲಕನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಆತನನ್ನು ಕೂಡಿ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾರಂತೆ. ಬಾಲ ನ್ಯಾಯ ಮಂಡಳಿಯ ಮುಂದೆ ಬಾಲಕನನ್ನು ಹಾಜರುಪಡಿಸಬೇಕಾದ ಪೊಲೀಸರು, ಠಾಣೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ದೇವನೇಯನ್ ಹೇಳಿದ್ದಾರೆ.

ಬಾಲಕಿಯರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಲಿಖಿತ ದೂರು ನೀಡದ ಕಾರಣ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿರುವನ್ಮಿಯೂರ್ ಪೊಲೀಸ್ ಠಾಣೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಪ್ರಸ್ತುತ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿದ್ದು, ಎಫ್‌ಐಆರ್ ದಾಖಲಿಸಲು ಪೊಲೀಸರು ಅವರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪ್ರಾಪ್ತ ಬಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಶಾಲೆಯ ಸಿಬ್ಬಂದಿ ಸಂತ್ರಸ್ತ ಬಾಲಕಿಯರೊಂದಿಗೆ ಮಾತನಾಡಿದ್ದಾರೆ. ಮಕ್ಕಳ ಸಹಾಯವಾಣಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಶಾಲೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಎಫ್‌ಐಆರ್ ದಾಖಲಿಸದಿರುವ ಪೊಲೀಸರ ಕ್ರಮವು ಅಪರಾಧವಾಗಿದೆ. ಏಕೆಂದರೆ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 19 ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸುವಂತೆ ಹೇಳುತ್ತದೆ. ಪೊಲೀಸರು ಮಾಡಿರುವ ತಪ್ಪಿಗೆ ಅವರು ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ. ಮಕ್ಕಳ ಕಲ್ಯಾಣ ಸಮಿತಿಯ ಮಧ್ಯಪ್ರವೇಶವಿಲ್ಲದೆ ಪೊಲೀಸರು ಎಫ್‌ಐಆರ್ ದಾಖಲಿಸಬಹುದು ಎಂದು ದೇವನೇಯನ್ ತಿಳಿಸಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವಿದೆ. ಅವರು ಕೂಡಲೇ ಎಫ್‌ಐಆರ್ ದಾಖಲಿಸಿ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿತ್ತು ಎಂದು ದೇವನೇಯನ್ ಟೀಕಿಸಿದ್ದಾರೆ. ಡಿಎಂಕೆ ಶಾಸಕ ಐ ಕರುಣಾನಿಧಿ ಅವರ ಪುತ್ರ ಮತ್ತು ಸೊಸೆ ದಲಿತ ಬಾಲಕಿಯ ಮೇಲೆ ದೈಹಿಕವಾಗಿ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವನ್ನು ಉಲ್ಲೇಖಿಸಿದ ಅವರು “ತಿರುವನ್ಮಿಯೂರ್ ಪೊಲೀಸರು ಈ ರೀತಿಯ ಪ್ರಕರಣವನ್ನು ನಿರ್ಲಕ್ಷ್ಯದಿಂದ ನಿರ್ವಹಿಸುತ್ತಿರುವುದು ಇದು ಎರಡನೇ ಬಾರಿಗೆ” ಎಂದು ಹೇಳಿದ್ದಾರೆ.

Related Articles

Back to top button