ಕಾರ್ಕಳ ಪರಶುರಾಮನ ನಕಲಿ ಪ್ರತಿಮೆ ಪ್ರಕರಣ: ಶಿಲ್ಪಿ ಕೇರಳದಲ್ಲಿ ಬಂಧನ

Views: 179
ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಶಿಲ್ಪಿ ಕೃಷ್ಣ ನಾಯ್ಕ ಅವರನ್ನು ಕೇರಳದಲ್ಲಿ ಪೋಲಿಸರು ಬಂಧಿಸಿದ್ದಾರೆ.
ಬೆಂಗಳೂರು ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ಎಂಬವರು ಪರಶುರಾಮನ ಕಂಚಿನ ವಿಗ್ರಹವನ್ನು ನಿರ್ಮಿಸಿಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದುಕೊಂಡಿದ್ದರು. ಬಳಿಕ ಆತ ಕಂಚಿನ ವಿಗ್ರಹ ತಯಾರಿಸದೆ, ನಕಲಿ ವಿಗ್ರಹವನ್ನು ಸಿದ್ದಪಡಿಸಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಬಜಗೋಳಿಯ ಕೃಷ್ಣ ಶೆಟ್ಟಿ ಎಂಬವರು ಪರಶುರಾಮನ ಪ್ರತಿಮೆ ಕಳುವಾಗಿದೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಶಿಲ್ಪಿಯ ಕೃಷ್ಣ ನಾಯಕ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ನಾಯ್ಕ್ ಕೋರ್ಟ್ ನಲ್ಲಿ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ್ದರು. ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ತಿರಸ್ಕರಿಸಿ ಆದೇಶ ನೀಡಿತ್ತು. ಅನಂತರ ಪೊಲೀಸರು ಪತ್ತೆ ಕಾರ್ಯ ತೀವ್ರಗೊಳಿಸಿ ಹುಡುಕಾಟ ನಡೆಸಿದ್ದರು. ಕೇರಳದ ಕ್ಯಾಲಿಕಟ್ ನಲ್ಲಿ ತಲೆಮರಸಿಕೊಂಡಿದ್ದ ಕೃಷ್ಣ ನಾಯ್ಕ್ ಅವರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಲು ಯಶಸ್ವಿಯಾಗಿದ್ದಾರೆ.






