ಕಾರು ಡಿಕ್ಕಿಯಾಗಿ ಮದುವೆ ನಿಶ್ಚಿಯಗೊಂಡಿದ್ದ ಯುವತಿ ಸಾವು

Views: 124
ಮಂಗಳೂರು, ಡಿಸೆಂಬರ್ 29 ಅತಿವೇಗದಿಂದ ಬಂದ ಕಾರೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಗಂಟೆಗೆ ಬಿ.ಸಿ.ರೋಡ್ ಕೈಕಂಬ ಪಚ್ಚಿನಡ್ಕದ ಬಳಿ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ.
ಪಚ್ಚಿನಡ್ಕದ ನಿವಾಸಿ ಚೈತ್ರಾ (22 ) ಮೃತ ಯುವತಿ ಎಂದು ಗುರುತಿಸಲಾಗಿದೆ. ಚೈತ್ರಾ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದಿಂದ ಅವರು ಕಾರ್ಯಕ್ರಮವೊಂದರ ನಿಮಿತ್ತ ತಾಯಿಯೊಂದಿಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ.
ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಸ್ವಿಫ್ಟ್ ಕಾರು ಚೈತ್ರಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಅತಿವೇಗದಿಂದ ಬಂದ ಕಾರು ಚೈತ್ರಾಗೆ ಡಿಕ್ಕಿ ಹೊಡೆದು ಅಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು, ಮನೆಯೊಂದರ ಕಾಂಪೌಂಡ್‌ಗೆ ಕೂಡ ಡಿಕ್ಕಿಯಾಗಿ ನಿಂತಿದೆ.
ತಕ್ಷಣ ಅಲ್ಲಿಯೇ ಹೋಗುತ್ತಿದ್ದ ಟ್ರಾಫಿಕ್ ಎ.ಎಸ್.ಐ ಸುರೇಶ್ ಪಡಾರ್, ಹಾಗೂ ಹೆಚ್.ಸಿ ರಮೇಶ್ ಖಾಸಗಿ ವಾಹನದಲ್ಲಿ ಚೈತ್ರಾಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಚೈತ್ರಾಗೆ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ಈಕೆ ಮೃತಪಟ್ಟಿರುವುದಾಗಿ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಘಟನೆಯ ಬಳಿಕ ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ಈ ಬಗ್ಗೆ ಮೆಲ್ಕಾರ್ ಸಂಚಾರಿ ಪೋಲಿದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೈತ್ರಾಳಿಗೆ ನಿಶ್ಚಿತಾರ್ಥವಾಗಿದ್ದು, ಮಾರ್ಚ್ 3ರಂದು ಕೊಡ್ಯಡ್ಕದ ಯುವಕನೊಂದಿಗೆ ಆಕೆಯ ಮದುವೆ ನಿಗದಿಯಾಗಿತ್ತು. ಮದುವೆಯಾಗಿ ಪತಿಯ ಮನೆಗೆ ಹೋಗಬೇಕಿದ್ದ ಯುವತಿ ಇದೀಗ ಕಾರು ಚಾಲಕನ ಅಜಾಗರೂಕತೆಗೆ ಮಸಣ ಸೇರುವಂತಾಗಿದೆ. ಗಾಂಜಾ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಚೈತ್ರಾ ಕುಟುಂಬಸ್ಥರು ದೂರು ನೀಡಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.