ಸಾಂಸ್ಕೃತಿಕ

ಕಾಂತಾರ ವಾರ್ಷಿಕೋತ್ಸವಕ್ಕೆ ವರಾಹ ರೂಪಂ ಗಿಫ್ಟ್: ಸಂಪೂರ್ಣ ಹಾಡು ಬಿಡುಗಡೆ ಮಾಡಿದ ಹೊಂಬಾಳೆ ಫಿಲಂಸ್ 

Views: 0

ಕಾಂತಾರ ವಾರ್ಷಿಕೋತ್ಸವಕ್ಕೆ ವರಾಹ ರೂಪಂ ಗಿಫ್ಟ್: ಸಂಪೂರ್ಣ ಹಾಡು ಬಿಡುಗಡೆ ಮಾಡಿದ ಹೊಂಬಾಳೆ ಫಿಲಂಸ್

ಕಾಂತಾರ ಚಿತ್ರದ ಹಾಡುಗಳ ವಿಚಾರಕ್ಕೆ ಬಂದರೆ, ಸಿಂಗಾರ ಸಿರಿಯೇ ಮತ್ತು ವರಾಹ ರೂಪಂ ಸೃಷ್ಟಿಸಿದ್ದ ಕ್ರೇಜ್‌ ಸಣ್ಣದೇನಲ್ಲ. ಅಜನೀಶ್‌ ಲೋಕನಾಥ್‌ ನೀಡಿದ್ದ ಸಂಗೀತಕ್ಕೆ ಕೇಳುಗ ಮಂತ್ರಮುಗ್ದನಾಗಿದ್ದ. ಎರಡೂ ಹಾಡುಗಳ ಲಿರಿಕಲ್‌ ವಿಡಿಯೋ ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದ್ದವು. ಇದೀಗ ಕಾಂತಾರ ಸಿನಿಮಾ ಬಿಡುಗಡೆಯಾಗಿ  ಒಂದು ವರ್ಷವಾಯ್ತು. ಈ ಹಿನ್ನೆಲೆಯಲ್ಲಿ ವರಾಹ ರೂಪಂ ಹಾಡಿನ ಪೂರ್ತಿ ವಿಡಿಯೋ ಹಾಡನ್ನು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್‌ ಮಾಡಿದೆ.

ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಅದಕ್ಕೆ ಸಿಕ್ಕ ಮನ್ನಣೆ, ಆ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಪ್ರಶಂಸೆಯ ಸುರಿಮಳೆಯೇ ಸುರಿಯಿತು. ಯಾವುದೇ ನಿರೀಕ್ಷೆ ಇಲ್ಲದೆ, ತಮ್ಮ ಕೆಲಸ ಮಾಡಿದ್ದ ಇಡೀ ತಂಡಕ್ಕೆ ಅಭೂತಪೂರ್ವ ಯಶಸ್ಸು ಹಿಂಬಾಲಿಸಿ ಬಂದಿದ್ದು ಮಾತ್ರ ಸುಳ್ಳಲ್ಲ. ರಿಷಬ್‌ಗೆ ಇದೇ ಸಿನಿಮಾದಿಂದ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳೂ ಒಲಿದು ಬಂದವು. ಈ ಚಿತ್ರದ ನಾಯಕಿ ಸಪ್ತಮಿ ಗೌಡ ಬಾಲಿವುಡ್‌ನಲ್ಲಿಯೂ ಗಮನ ಸೆಳೆದರು. ಕೇವಲ 16 ಕೋಟಿಯಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 450 ಕೋಟಿ ಕಲೆಕ್ಷನ್‌ ಮಾಡಿ ಹೊಸ ದಾಖಲೆಯನ್ನೂ ನಿರ್ಮಿಸಿ.

ಇದೀಗ ಸಿನಿಮಾದ ಮೊದಲ ವಾರ್ಷಿಕೋತ್ಸವದ ನಿಮಿತ್ತ ಬಿಡುಗಡೆಯಾದ ವರಾಹ ರೂಪಂ ಹಾಡು ಹೇಳಿದ ವೀಕ್ಷಕರು, ಮತ್ತೊಮ್ಮೆ ಆಗಿನ ರೋಮಾಂಚನವನ್ನು ಮತ್ತೆ ಅನುಭವಿಸುತ್ತಿದ್ದಾರಂತೆ. ಹಾಡು ಮತ್ತು ಸಿನಿಮಾ ಬಗ್ಗೆ ಕಾಮೆಂಟ್‌ಗಳ ರಾಶಿಯೇ ಹರಿದು ಬರುತ್ತಿದ್ದು, ಡಿವೈನ್‌ ಬ್ಲಾಕ್‌ ಬಸ್ಟರ್‌ ಸಿನಿಮಾ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. ಈ ಥರದ ಸಿನಿಮಾಗಳನ್ನು ಜೀವನದಲ್ಲಿ ಒಮ್ಮೆ ಮಾತ್ರ ಮಾಡಲು ಸಾಧ್ಯ.. ಕಾಂತಾರ ಸಿನಿಮಾ ವರ್ಣನೆಗೆ ಆಸ್ಕರ್‌, ಗೋಲ್ಡನ್‌ ಗ್ಲೋಬ್‌ ಬೇಕಾಗಿಲ್ಲ. ಅಷ್ಟೊಂದು ಸೊಗಸಾಗಿದೆ ಈ ಸಿನಿಮಾ ಎಂದೆಲ್ಲ ತಮ್ಮ ಮೆಚ್ಚುಗೆ ಸೂಚಿಸುತ್ತಿದ್ದಾರೆ.

100 ಕೋಟಿ ವೆಚ್ಚದಲ್ಲಿ 2ನೇ ಕಾಂತಾರ!

ಇನ್ನು ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಇದೇ ಸಿನಿಮಾದ ಪ್ರೀಕ್ವೆಲ್‌ ಕಥೆಯ ಕೆಲಸಗಳಲ್ಲಿ ರಿಷಬ್‌ ಶೆಟ್ಟಿ ಮತ್ತವರ ತಂಡ ತೊಡಗಿಸಿಕೊಂಡಿದೆ. ಬಹುತೇಕ ಸ್ಕ್ರಿಪ್ಟಿಂಗ್‌ ಕೆಲಸಗಳನ್ನು ಮುಗಿಸಿಕೊಂಡಿರುವ ತಂಡ, ಲೊಕೇಷನ್‌ಗಳನ್ನೂ ಫಿಕ್ಸ್‌ ಮಾಡಿದೆ. ಇನ್ನೇನು ಶೀಘ್ರದಲ್ಲಿಯೇ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ ಕಾಂತಾರ ಬಳಗ. ಇದರ ಜತೆಯಲ್ಲಿ ಮೊದಲ ಭಾಗಕ್ಕಿಂತ ಅದ್ದೂರಿಯಾಗಿಯೇ ಈ ಸಿನಿಮಾ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ಸರಿ ಸುಮಾರು ನೂರು ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂಬ ಸುದ್ದಿಯೂ ಕೆಲ ದಿನಗಳ ಹಿಂದಷ್ಟೇ ಹರಿದಾಡುತ್ತಿತ್ತು.

Related Articles

Back to top button