ಜನಮನ

ಕಂದಕಕ್ಕೆ ಉರಳಿದ ಸೇನಾ ವಾಹನ: ಕುಂದಾಪುರ ಬೀಜಾಡಿ ಮೂಲದ ಯೋಧ ಹುತಾತ್ಮ

Views: 271

ಕನ್ನಡ ಕರಾವಳಿ ಸುದ್ದಿ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಪಲ್ಟಿಯಾಗಿ ಕುಂದಾಪುರ ಬೀಜಾಡಿ ಮೂಲದ ಯೋಧ ಸೇರಿ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.

ದುರಂತದಲ್ಲಿ ಹುತಾತ್ಮರಾದ ಸೈನಿಕರಲ್ಲಿ  ಕರ್ನಾಟಕದ ಮೂವರು ಯೋಧ ಸೇರಿ ಐವರು ಮೃತ ಪಟ್ಟಿದ್ದಾರೆ. ಈ ಪೈಕಿ ಓರ್ವ ಯೋಧ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ (31) ಹುತಾತ್ಮ ಯೋಧ.ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಗಳ ಪುತ್ರ ಅನೂಪ್ ಪೂಜಾರಿ ಸೇನೆಗೆ ಸೇರಿ 13 ವರ್ಷವಾಗಿತ್ತು. ಅವರು ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮಂಗಳವಾರ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ಲೋಯಿ ಬಳಿ ಸೇನಾ ವಾಹನವೊಂದು ದಾರಿ ತಪ್ಪಿ ಕಂದಕಕ್ಕೆ ಬಿದ್ದಿದ್ದು, ಇದರಲ್ಲಿದ್ದ 5 ಸೈನಿಕರು ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಸುಮಾರು 100-150 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದ್ದು, ಮಾಹಿತಿ ಬಂದ ತಕ್ಷಣ ತುರ್ತು ರೆಸ್ಪಾನ್ಸ್ ಟೀಮ್ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದೆ.

ರಕ್ಷಣಾ ಸಿಬ್ಬಂದಿ ಐವರು ಮೃತ ಯೋಧರ ಶವಗಳನ್ನು ಹೊರತೆಗೆದಿದ್ದು ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.ವಾಹನದಲ್ಲಿ ಹತ್ತು ಸೈನಿಕರಿದ್ದು, ಐವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹುತಾತ್ಮರಾಧ ಯೋಧ ಅನೂಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ. ಕಳೆದ ತಿಂಗಳು ರಜೆಗೆ ಆಗಮಿಸಿದ್ದ ಅವರು ಡಿ.15 ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಘೊಂಡಿದ್ದಲ್ಲದೆ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು. ಹುತಾತ್ಮ ಯೋಧ ತಾಯಿ, ಇಬ್ಬರು ಸಹೋದರಿಯರು, ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಾಳೆ (ಗುರುವಾರ) ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗುತ್ತದೆ. ಸಮಾಜ ಸೇವಕ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಗ್ರಾಮಸ್ತರ ನೇತೃತ್ವದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ದತೆ ಮಾಡಲಾಗುತ್ತಿದೆ.

 

Related Articles

Back to top button