ಆರ್ಥಿಕ

ಎಟಿಎಂ ದರೋಡೆ ಪ್ರಕರಣ: ಹೈದರಾಬಾದ್ ನಲ್ಲಿ ಓರ್ವ ಆರೋಪಿ ಸೆರೆ, ಅಲ್ಲಿಯೂ ಗುಂಡಿನ ದಾಳಿ

Views: 247

ಕನ್ನಡ ಕರಾವಳಿ ಸುದ್ದಿ: ಬೀದರ್ ನಲ್ಲಿ ಗುರುವಾರ ಬೆಳಗ್ಗೆ ಎಟಿಎಂಗೆ ಹಣ ತುಂಬಿಸುವ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಹಿಡಿಯುವ ವೇಳೆ ಮತ್ತೆ ಗುಂಡು ಹಾರಿಸಿದ್ದಾರೆ. ಮೂವರು ದರೋಡೆಕೋರರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ.

ಬೀದರ್ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಎಟಿಎಂಗೆ ಹಣ ತುಂಬಿಸಲು ಬ್ಯಾಂಕ್ ಸಿಬ್ಬಂದಿ ತೆರಳಿದ್ದಾಗ, ದರೋಡೆಕೋರರು ಗುಂಡು ಹಾರಿಸಿ ಓರ್ವನನ್ನು ಕೊಂದು ಹಣದ ಸಮೇತ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬೆನ್ನುಬಿದ್ದಿದ್ದ ಪೊಲೀಸರು, ಸುಳಿವು ಆಧರಿಸಿ ಹೈದರಾಬಾದ್ನಲ್ಲಿ ಶೋಧ ನಡೆಸುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅಲ್ಲಿಯೂ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಬಸ್ ಟ್ರಾವೆಲ್ ಮ್ಯಾನೇಜರ್ ಗಾಯಗೊಂಡಿದ್ದಾರೆ.

ರಾಯಪುರಕ್ಕೆ ಎಸ್ಕೇಪ್ ಪ್ಲಾನ್: ಬೀದರ್ನಲ್ಲಿ ಹಣ ದೋಚಿಕೊಂಡು ಬಂದಿದ್ದ ಆರೋಪಿಗಳು ಹೈದರಾಬಾದ್ ಮೂಲಕ ಛತ್ತೀಸ್ಗಢದ ರಾಯಪುರಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಮೂವರು ದುಷ್ಕರ್ಮಿಗಳು ಖಾಸಗಿ ಬಸ್ ಟ್ರಾವೆಲ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಸಂಜೆ 7.30 ಕ್ಕೆ ಬಸ್ ಹೊರಡಬೇಕಿತ್ತು. ಅದಕ್ಕೂ ಮೊದಲು ಆರೋಪಿಗಳನ್ನು ಟ್ರಾವೆಲ್ ಏಜೆನ್ಸಿ ಅವರನ್ನು ಪಿಕಪ್ ಮಾಡಿದ್ದಾರೆ.

ಈ ವೇಳೆ ಆರೋಪಿಗಳ ಲಗೇಜ್ ಅನ್ನು ಬಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಗ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಕಂಡು ಬಂದಿದೆ. ಇದನ್ನು ಸಿಬ್ಬಂದಿ ಪ್ರಶ್ನಿಸಿದಾಗ ಅವರಿಗೇ ಸ್ವಲ್ಪ ಹಣ ನೀಡಲು ಮುಂದಾಗಿದ್ದಾರೆ. ಈ ವೇಳೆ, ಅದೇ ಪಿಕಪ್ ವ್ಯಾನ್ನಲ್ಲಿ ಇದ್ದ ಕರ್ನಾಟಕ ಪೊಲೀಸರು ಇದನ್ನ ಗಮನಿಸಿದ್ದಾರೆ.

ಪೊಲೀಸರು ಎಂದು ತಿಳಿದ ತಕ್ಷಣವೇ ಆರೋಪಿಗಳು ತಮ್ಮ ಬ್ಯಾಗ್ನಲ್ಲಿದ್ದ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಇದರಿಂದ ಟ್ರಾವೆಲ್ ಏಜೆನ್ಸಿ ಮ್ಯಾನೇಜರ್ ಹೊಟ್ಟೆಗೆ ಬುಲೆಟ್ ಹೊಕ್ಕಿದೆ. ಸ್ಥಳದಲ್ಲಿದ್ದ ಮತ್ತೊಬ್ಬರಿಗೂ ಗಾಯವಾಗಿದೆ. ಪೊಲೀಸರು ಹರಸಾಹಪಟ್ಟು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದರೋಡೆಕೋರರು ಲೂಟಿ ಮಾಡಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ  ಪೊಲೀಸರ ವಶದಲ್ಲಿದ್ದಾನೆ.

Related Articles

Back to top button