SSLC,PUC ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೆ ಕ್ರಿಮಿನಲ್ ಮೊಕದ್ದಮೆ, ಸೇವೆಯಿಂದ ವಜಾ

Views: 50
ಬೆಂಗಳೂರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇತರ ಅಕ್ರಮ ತಡೆಯಲು ಕರ್ನಾಟಕ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವಿ. ಟಿ. ರಾಜ್ಯಶ್ರೀ ಸರ್ಕಾರದ ಅಧೀನ ಕಾರ್ಯದರ್ಶಿ ಶಿಕ್ಷಣ ಇಲಾಖೆ (ಪ್ರೌಢ ಶಿಕ್ಷಣ) ಆದೇಶವನ್ನು ಹೊರಡಿಸಿದ್ದಾರೆ. ಆದೇಶ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ಪೂರ್ವ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ/ ಸಿಬ್ಬಂದಿ ವರ್ಗದವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಲು ಮತ್ತು ಇಲಾಖಾ ವಿಚಾರಣೆ ನಡೆಸುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಸದರಿ ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆಯನ್ನು ನಡೆಸಲು ಕ್ರಮಕೈಗೊಳ್ಳುತ್ತದೆ. ಏತನ್ಮಧ್ಯೆ ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರನ್ನು ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದರನ್ವಯ ಕಾನೂನು ಬಾಹಿರವಾಗಿ ಪರೀಕ್ಷಾ ಅಕ್ರಮಗಳಲ್ಲಿ ಪಾಲ್ಗೊಳ್ಳುವವರು ಮತ್ತು ಇದಕ್ಕೆ ಸಹಕರಿಸುವವರು/ ಪ್ರಚೋದಿಸುವವರು ವಿದ್ಯಾರ್ಥಿಗಳಾಗಿರಲಿ, ಶಿಕ್ಷಕರಾಗಿರಲಿ, ಬಾಹ್ಯ ವ್ಯಕ್ತಿಗಳಾಗಿರಲಿ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ/ ಸಿಬ್ಬಂದಿ ವರ್ಗದವರು, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರು/ ಶಿಕ್ಷಕರು/ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸುವುದು ಅಲ್ಲದೆ ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸುವ ಬಗ್ಗೆ ಸೂಕ್ತ ಸರ್ಕಾರದ ಆದೇಶ ಹೊರಡಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ ಅನ್ವಯ ಸೋರಿಕೆ, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೊ ತೆಗೆಯುವುದು ಮತ್ತು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಾಟ್ಸಾಪ್ ಮುಖಾಂತರ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು ಇನ್ನಿತರ ಯಾವುದೇ ಪರೀಕ್ಷಾ ಅವ್ಯವಹಾರದ ಅಪರಾಧಕೃತ್ಯದಲ್ಲಿ ಭಾಗಿಯಾದವರಿಗೆ 3 ರಿಂದ 5 ವರ್ಷ ಜೈಲು ಹಾಗೂ 5 ಲಕ್ಷದಂಡ ವಿಧಿಸುವ ಅವಕಾಶವಿರುತ್ತದೆ.
ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, 10ನೇ ತರಗತಿ ಮತ್ತು ಪದವಿ ಪೂರ್ವ ಪರೀಕ್ಷಾ ಅಕ್ರಮದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೊ ತೆಗೆಯುವುದು ಮತ್ತು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು, ಪರೀಕ್ಷಾ ದುರ್ವ್ಯವಹಾರಕ್ಕಾಗಿ ಪ್ರೇರೇಪಿಸುವುದು ಮತ್ತು ಅಧಿಕೃತ ಪ್ರಶ್ನೆಪತ್ರಿಕೆ ಅಲ್ಲದಿದ್ದರೂ, ಪ್ರಶ್ನೆಪತ್ರಿಕೆ ಹೆಸರಿನಲ್ಲಿ ಗೊಂದಲ ಸೃಷ್ಟಿಸುವುದರ ಮೂಲಕ ವಿದ್ಯಾರ್ಥಿಗಳು/ ಪೋಷಕರಲ್ಲಿ ಆತಂಕವುಂಟುಮಾಡಿ ಇಡೀ ಪರೀಕ್ಷಾ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೃತ್ಯವೆಸಗುವುದು, ಅಲ್ಲದೆ, ಇಲಾಖೆಯ ಮೇಲೆ ಅನಾವಶ್ಯಕ ಸಂಶಯ ಹುಟ್ಟು ಹಾಕಲು ಕಾರಣವಾಗುವುದಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕ ಉಂಟುಮಾಡುವುದು ಅಪರಾಧವೆಂದು ಪರಿಗಣಿಸಲ್ಪಡುತ್ತದೆ ಎಂದು ಹೇಳಿದೆ.