ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು
Views: 29
ಕನ್ನಡ ಕರಾವಳಿ ಸುದ್ದಿ: ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.
ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಹರೀಶ್ ಪಿ.ಕೆ. ಅವರ ಪುತ್ರಿ ಅರ್ಪಿತಾ (15) ಮತ್ತು ಅವರ ಅಕ್ಕ ಶಕುಂತಲಾ ಅವರ ಪುತ್ರಿ ಸುನೀತಾ (21) ಮೃತಪಟ್ಟ ದುರ್ದೈವಿಗಳು.
ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಅರ್ಪಿತಾ. ಸುನೀತಾ ಸೇರಿದಂತೆ ಕುಟುಂಬದ ಆರು ಮಂದಿ ಸದಸ್ಯರು ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಸಮೀಪ ಹರಿಯುವ ಗುಂಡ್ಯ ಹೊಳೆಗೆ ಸ್ನಾನಕ್ಕಾಗಿ ತೆರಳಿದ್ದರು. ಸಂಜೆ 4:30ರ ಸುಮಾರಿಗೆ ನದಿಯಲ್ಲಿ ಈಜಾಡುತ್ತಿದ್ದಾಗ, ಅರ್ಪಿತಾ ಮತ್ತು ಸುನೀತಾ ಆಕಸ್ಮಿಕವಾಗಿ ನೀರಿನ ಆಳವಾದ ಭಾಗಕ್ಕೆ ಸಿಲುಕಿದ್ದಾರೆ. ಜೊತೆಯಲ್ಲಿದ್ದವರು ರಕ್ಷಿಸಲು ಪ್ರಯತ್ನಿಸಿದರಾದರೂ ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರೂ ಕಣ್ಣಮುಂದೆಯೇ ಮುಳುಗಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆಯೇ ಮೃತ ಅರ್ಪಿತಾಳ ಸಹೋದರ ಹರಿವಿಷ್ಣು ತಂದೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳೀಯ ನಿವಾಸಿ ಜಾರ್ಜ್ ಎಂಬುವವರು ನದಿಗೆ ಇಳಿದು ಹುಡುಕಾಟ ನಡೆಸಿದ್ದು. ಇಬ್ಬರ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.






