ವೈದ್ಯ ಆತ್ಮಹತ್ಯೆ ಬೆನ್ನಲ್ಲೇ ನರ್ಸ್ ನೇಣಿಗೆ ಶರಣು: ಹಲವು ಅನುಮಾನಗಳಿಗೆ ತನಿಖೆ ಚುರುಕು
Views: 43
ಕನ್ನಡ ಕರಾವಳಿ ಸುದ್ದಿ: ವೈದ್ಯ ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳಲ್ಲೇ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕೂಡ ನೇಣಿಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನವೋದಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸರಸ್ವತಿ (45) ಎಂಬುವವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಇವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವೈದ್ಯ ಡಾ. ಚೇತನ್ ಟೆಂಕರ್ ಅವರು ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ನರ್ಸ್ ಆತ್ಮಹತ್ಯೆಗೆ ಶರಣಾಗಿರುವ ಅನುಮಾನಗಳು ಹೆಚ್ಚಾಗುವಂತೆ ಮಾಡಿದೆ.
ಘಟನೆ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಎರಡೂ ಘಟನೆಗಳ ನಡುವೆ ಯಾವುದೇ ಸಂಬಂಧ ಇದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಎರಡು ಘಟನೆಗಳ ಕುರಿತು ಕನಕಪುರ ಟೌನ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಎರಡೂ ಆತ್ಮಹತ್ಯೆ ಪ್ರಕರಣಗಳ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಗಳು ಪರಸ್ಪರ ಸಂಬಂಧ ಹೊಂದಿದವೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಮೃತರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಸ್ವತಿ ಅವರು ಸಂಜೆ ಸುಮಾರು 6 ಗಂಟೆಗೆ ಡಾ. ಚೇತನ್ ಅವರ ಹಳೆ ಮನೆಗೆ ಬಂದು, ‘ತಮ್ಮ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಮನೆ ಬಾಡಿಗೆದಾರರಿಗೆ ಹೇಳಿ ಎರಡನೇ ಮಹಡಿಗೆ ಹೋಗಿದ್ದರು. ಮಹಡಿ ಮೇಲೆ ಹೋದ ಸರಸ್ವತಿ ಅವರು, ಒಂದು ಗಂಟೆಯಾದರೂ ವಾಪಸ್ ಕೆಳಗೆ ಬರಲಿಲ್ಲ. ಇದರಿಂದ ಅನುಮಾನಗೊಂಡ ಬಾಡಿಗೆ ಮನೆಯವರು ಮಹಡಿ ಮೇಲೆ ಹೋಗಿ ನೋಡಿದಾಗ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಬಾಡಿಗೆ ಮನೆಯ ಮಹಿಳೆ, ಭಯಗೊಂಡು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ವಿಷಯ ತಿಳಿದ ಪಕ್ಕದ ಮನೆಯವರು ಸರಸ್ವತಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರದ ಕುರಿತು ಪೊಲೀಸರಿಗೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿ ಕುಟುಂಬದವರಿಗೆ ಮಾಹಿತಿ ನೀಡಿದರು.






