ನಿಶ್ಚಯವಾದ ಹುಡುಗಿಗೆ ಮದುವೆಗಾಗಿ ಕಿರುಕುಳ: ಯುವತಿ ಸೇರಿ ತಂದೆ-ತಾಯಿ ಆತ್ಮಹತ್ಯೆ
Views: 69
ಕನ್ನಡ ಕರಾವಳಿ ಸುದ್ದಿ:ಯುವಕನ ಕಿರುಕುಳಕ್ಕೆ ಬೇಸತ್ತು ಕುಟುಂಬವೊಂದರ ಮೂವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಮೈಸೂರು ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಣ್ಣ (50), ಪತ್ನಿ ನಾಗರತ್ನ (45) ಹಾಗೂ ಅವರ ಪುತ್ರಿ ರಕ್ಷಿತಾ (21) ತಮ್ಮ ಮನೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಶಿವಣ್ಣ ಅವರ ಮಗಳು ರಕ್ಷಿತಾಗೆ ಮದುವೆ ನಿಶ್ಚಯ ಆಗಿತ್ತು. ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಸೂತಕ ಆವರಿಸಿದ್ದು ನಿಜಕ್ಕೂ ದುರಂತ. ನಿಶ್ಚಿತಾ ರ್ಥದಲ್ಲಿ ಸಂಭ್ರಮದಿಂದ ಓಡಾಡಿದ್ದ ಉಲ್ಲಾಸ ಎಂಬಾತ ಕೆಲ ದಿನಗಳ ಹಿಂದೆ ರಕ್ಷಿತಾಳನ್ನು ಮದುವೆ ಮಾಡಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದನು. ಅಲ್ಲದೆ ಶಿವಣ್ಣ ಅವರ ಮನೆಗೆ ಬಂದು ಹೆಣ್ಣು ಕೊಡುವಂತೆ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಶಿವಣ್ಣ ನಿರಾಕರಣೆ ಮಾಡಿದ ವೇಳೆ ಗ್ರಾಮದಲ್ಲಿ ಗಲಾಟೆ ಮಾಡಿದ್ದನು. ಆಗ ಹಿರಿಯರ ಸಮ್ಮುಖದಲ್ಲಿ ನಡೆದು, ಈಗಾಗಲೇ ಯುವತಿಗೆ ಮದುವೆ ನಿಶ್ಚಯ ಆಗಿದೆ. ಹೀಗೆ ಮಾಡುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದರು. ಇಷ್ಟಕ್ಕೆ ಸುಮ್ಮನಾಗದ ಉಲ್ಲಾಸ್ ಮದುವೆ ನಿಶ್ಚಯವಾಗಿದ್ದ ಹುಡುಗಿಗೆ ವಾಟ್ಸಾಪ್ ಮೆಸೆಜ್, ಫೋಟೊಗಳನ್ನು ಕಳುಹಿಸಿದ್ದಾನೆ. ಈ ವಿಚಾರ ತಿಳಿದ ಶಿವಣ್ಣ ಕುಟುಂಬಸ್ಥರು ತೀವ್ರವಾಗಿ ನೊಂದು, ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ‘ನಮ್ಮ ಸಾವಿಗೆ ಉಲ್ಲಾಸ್ ಗೌಡ ಕಾರಣ’ ಆತನಿಗೆ ಶಿಕ್ಷೆ ಆಗಬೇಕು ಎಂದು 2 ಪುಟಗಳ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






