ಇತರೆ

ಉಡುಪಿ:ದಂಪತಿಗೆ ಕಾನೂನು ಬಾಹಿರವಾಗಿ ಮಗು ಪೂರೈಕೆ ಮಾಡಿದ ವೈದ್ಯ, ಮಗು ಪಡೆದ ವ್ಯಕ್ತಿ ಬಂಧನ

Views: 92

ಕನ್ನಡ ಕರಾವಳಿ ಸುದ್ದಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು ನೀಡಿದ ಘಟನೆಗೆ ಸಂಬಂಧಿಸಿ ನಗರದ ಖಾಸಗಿ ಆಸ್ಪತ್ರೆಯ ವೈದ್ಯ ಹಾಗೂ ಮಗುವನ್ನು ಪಡೆದ ವ್ಯಕ್ತಿಯನ್ನು ಜಿಲ್ಲಾ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಡಾ। ಸುರೇಂದ್ರ ಕಾಮತ್, ಸಂತೆಕಟ್ಟೆ ನೇಜಾರು ನಿವಾಸಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ, ಇತರರ ವಿರುದ್ಧ ಪ್ರಕರಣ ದಾಖಲಾ ಗಿದ್ದು, ವೈದ್ಯರು ಮತ್ತು ಪ್ರಕಾಶ್ ಅವರನ್ನು ಬಂಧಿಸಲಾಗಿದೆ.

ಜೂ.19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕಿ ಸವಿತಾ ಅವರು ಮಕ್ಕಳ ರಕ್ಷಣ ಘಟಕಕ್ಕೆ ಕರೆ ಮಾಡಿ ಸಂತೆಕಟ್ಟೆಯ ನೇಜಾರಿನಲ್ಲಿ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಸುಮಾರು ಒಂದು ತಿಂಗಳ ಹೆಣ್ಣುಮಗುವನ್ನು ತಂದು ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂದು ದೂರು ನೀಡಿದ್ದರು.

ಮಕ್ಕಳ ರಕ್ಷಣ ಘಟಕದ ರಕ್ಷಣಾಧಿಕಾರಿ ಯೋಗೀಶ್, ಸುರಕ್ಷಾ ಜತೆ ವಲಯ ಮೇಲ್ವಿಚಾರಕಿ ಸವಿತಾ ಅವರೊಂದಿಗೆ ನೇಜಾರಿಗೆ ತೆರಳಿದಾಗ ಅಲ್ಲಿ ದಂಪತಿ ಇರಲಿಲ್ಲ. ಬಳಿಕ ಮಾಹಿತಿ ಮೇರೆಗೆ ಸಂತೆಕಟ್ಟೆಯ ಸುಬ್ರಹ್ಮಣ್ಯನಗರದ ಮನೆಗೆ ತೆರಳಿದಾಗ ಪೂರ್ಣಿಮಾ, ಪತಿ ಪ್ರಕಾಶ್, ಒಂದು ತಿಂಗಳ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಹಿರಿಯ ಸಹೋದರಿ ಲಕ್ಷ್ಮೀ ಅವರು ಮನೆಯಲ್ಲಿ ಹಾಜರಿದ್ದರು. ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆರೋಪಿತರು ಅನುಮಾನಾಸ್ಪದ ಹೇಳಿಕೆ ನೀಡಿದ್ದು, ಬಳಿಕ ಕೂಲಂಕಷವಾಗಿ ವಿಚಾರಿಸಿದಾಗ ನೈಜ ವಿಚಾರ ಬಾಯ್ದಿಟ್ಟಿದ್ದರು.

ಆರೋಪಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳು . ಇರದ ಹಿನ್ನೆಲೆ ನಗರದ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆ ಸಂದರ್ಭ ನರ್ಸಿಂಗ್ ಹೋಮ್‌ನಲ್ಲಿ ಮಗುವೊಂದು ಇರುವ ವಿಚಾರ ಲಕ್ಷ್ಮೀ ಅವರಿಗೆ ತಿಳಿದು ಬಂದಿತ್ತು. ಪ್ರಕಾಶ್ ಮತ್ತು ಪೂರ್ಣಿಮಾ ಅಲ್ಲಿನ ವೈದ್ಯರನ್ನು ಭೇಟಿಯಾಗಿ ಮಗುವನ್ನು ನೀಡುವಂತೆ ಕೇಳಿಕೊಂಡಿದ್ದರು. ವೈದ್ಯರು ದಂಪತಿಗೆ ಒಂದು ತಿಂಗಳ ಹಿಂದೆ ಜನಿಸಿದ್ದ ಯಾರದ್ದೋ ಹೆಣ್ಣು ಮಗುವನ್ನು ಕೊಟ್ಟಿದ್ದರು.

ಮಗುವಿನ ಜೈವಿಕ ಪೋಷಕರು ಯಾರು ಎಂದು ತಿಳಿದಿಲ್ಲ. ಮಗುವಿನ ಬಗ್ಗೆಯಾವುದೇ ಮಾಹಿತಿಯಿಲ್ಲ ಎಂದು ಆರೋಪಿ ದಂಪತಿ ಅಧಿಕಾರಿಗಳ ಮುಂದೆ ತಪ್ರೊಪ್ಪಿಕೊಂಡಿದ್ದರು. ಈ ಬಗ್ಗೆ ಜೂ. 20ರಂದು ಪ್ರಕರಣ ದಾಖಲಾಗಿತ್ತು.

Related Articles

Back to top button
error: Content is protected !!