ಕೇರಳದಲ್ಲಿ ‘ಶಿಗೆಲ್ಲಾ’ ಮತ್ತೊಂದು ವೈರಸ್ ಪತ್ತೆ: 4 ವರ್ಷದ ಮಗು ಸಾವು, 440 ಕ್ಕೂ ಅಧಿಕ ಮಂದಿಗೆ ಸೋಂಕು..ಹೈ ಅಲರ್ಟ್
Views: 54
ಕನ್ನಡ ಕರಾವಳಿ ಸುದ್ದಿ: ಕೇರಳದಲ್ಲಿ ಮತ್ತೊಂದು ವೈರಸ್ ಕಾಟ ಶುರುವಾಗಿದೆ. ಶಿಗೆಲ್ಲಾ ಎಂಬ ಸೋಂಕು ಹರಡಿದ್ದು, ಈಗಾಗಲೇ 4 ವರ್ಷದ ಮಗು ಸಾವನ್ನಪ್ಪಿದೆ. ಇದರ ಬೆನ್ನಲ್ಲೇ, 440 ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿರುವ ಸಾಧ್ಯತೆ ಇದೆ. ಎಲ್ಲರಿಗೂ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ವಯನಾಡ್, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಸೋಂಕು ವ್ಯಾಪಿಸಿದೆ. ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ವ್ಯಾಪ್ತಿಯ ನೆನ್ಮೇನಿ ಪಂಚಾಯತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಗೆಲ್ಲಾ ಸೋಂಕು ಹರಡಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಹೈ ಅಲರ್ಟ್ ಘೋಷಿಸಿವೆ. ನೂರಾರು ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಮಕ್ಕಳಲ್ಲಿ ಮೊದಲು ಪತ್ತೆ: ಕಳೆದ ವಾರ ಸುಲ್ತಾನ್ ಬತ್ತೇರಿಯ ಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ ಮತ್ತು ಜ್ವರ ಕಾಣಿಸಿಕೊಂಡಾಗ ಈ ಸೋಂಕು ಮೊದಲ ಬಾರಿಗೆ ಬೆಳಕಿಗೆ ಬಂದಿತು. ವೈದ್ಯಕೀಯ ತಪಾಸಣೆಯಲ್ಲಿ ಇಬ್ಬರು ಮಕ್ಕಳಿಗೆ ಶಿಗೆಲ್ಲಾ ಸೋಂಕು ಇರುವುದು ದೃಢಪಟ್ಟಿದೆ. ಇದಾದ ಬಳಿಕ 337 ವಿದ್ಯಾರ್ಥಿಗಳು ಸೇರಿ ಒಟ್ಟು 443 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 68 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 26 ಜನರು ಬತ್ತೇರಿ ತಾಲೂಕು ಆಸ್ಪತ್ರೆಯಲ್ಲಿದ್ದಾರೆ. ಉಳಿದ 42 ಜನರು ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ, 14 ಜನರಲ್ಲಿ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಒಟ್ಟು 163 ಜನರನ್ನು ತೀವ್ರ ನಿಗಾದಲ್ಲಿ ಇರಿಸಿದೆ.
ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸಲು ಕರೆ: ಸೋಂಕು ಹರಡುವುದನ್ನು ತಡೆಯಲು ಶಾಲೆಗಳು, ಆಸ್ಪತ್ರೆಗಳು ಮತ್ತು ಮನೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸಲು ಸರ್ಕಾರ ಸೂಚಿಸಿದೆ. ಕೆಲವು ಮಕ್ಕಳಲ್ಲಿ ರೋಗಲಕ್ಷಣಗಳು ಮರುಕಳಿಸುತ್ತಿದ್ದು, ಆಸ್ಪತ್ರೆಗಳಿಗೆ ಮರು ದಾಖಲಾಗುತ್ತಿದ್ದಾರೆ. ಹೀಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಲು ಆದೇಶಿಸಲಾಗಿದೆ.
ಸೋಂಕು ಮತ್ತಷ್ಟು ಹರಡದಂತೆ ತಡೆಯಲು, ಬಾಧಿತ ಮಕ್ಕಳು ಓದುತ್ತಿರುವ ಶಾಲೆಗಳಲ್ಲಿ ವಿಶೇಷ ನಿಗಾ ಇಡಲಾಗಿದೆ. ಲಕ್ಷಣಗಳು ಕಂಡುಬಂದ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳನ್ನು ಸತತವಾಗಿ ಗಮನಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.
4 ವರ್ಷದ ಬಾಲಕ ಸಾವು: ಕೋಯಿಕ್ಕೋಡ್ ಜಿಲ್ಲೆಯಲ್ಲಿ ಇದೇ ಶಿಗೆಲ್ಲಾ ಸೋಂಕಿಗೆ ನಾಲ್ಕು ವರ್ಷದ ಮಗುವೊಂದು ಮೃತಪಟ್ಟಿದೆ. ರಾಜ್ಯದಲ್ಲಿ ಶಿಗೆಲ್ಲಾ ಸೋಂಕಿನಿಂದ ಆದ ಮೊದಲ ಪ್ರಕರಣ ಇದಾಗಿದೆ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.
ಶಿಗೆಲ್ಲಾ ಸೋಂಕು ಎಂದರೇನು?
ಶಿಗೆಲ್ಲಾ ಬ್ಯಾಕ್ಟೀರಿಯಾದ ಸೋಂಕಾಗಿದ್ದು, ಜೀರ್ಣಾಂಗ ವ್ಯವಸ್ಥೆಯ ಮೇಲೆ, ಅದರಲ್ಲೂ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದ್ದು, ಕಲುಷಿತ ಆಹಾರ ಅಥವಾ ಕಲುಷಿತ ನೀರಿನ ಸೇವನೆಯಿಂದ ಹರಡುತ್ತದೆ. ಅತಿಸಾರಕ್ಕೆ ಕಾರಣವಾಗುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕಕ್ಕೆ ಬರುವ ಮೂಲಕವೂ ಹರಡಬಹುದು. ಉದಾಹರಣೆಗೆ, ಸೋಂಕಿತ ಮಗುವಿನ ಡೈಪರ್ ಬದಲಾಯಿಸಿದ ನಂತರ ವ್ಯಕ್ತಿಯು ಕೈ ತೊಳೆಯದಿದ್ದರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ.
ಸೋಂಕಿನ ತೀವ್ರತೆಯಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ. ಶಿಗೆಲ್ಲ ಸೋಂಕಿನ ಸೌಮ್ಯ ಲಕ್ಷಣಗಳಿರುವ ವ್ಯಕ್ತಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಆದರೆ, ತೀವ್ರವಾದ ಅತಿಸಾರ ಮೂರು ದಿನಗಳವರೆಗೆ ಮುಂದುವರಿದರೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.






