ಮಹಾರಾಷ್ಟ್ರ: ‘ಆಪರೇಷನ್ ಟೈಗರ್’… 6 ಜನ ಲೋಕಸಭಾ ಸಂಸದರು ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆ
Views: 22
ಕನ್ನಡ ಕರಾವಳಿ ಸುದ್ದಿ: ಮಹಾರಾಷ್ಟದ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಚೇತರಿಸಿಕೊಳ್ಳಲಾಗದ ದೊಡ್ಡ ಹೊಡೆತ ಬಿದ್ದಿದ್ದು, ಪಕ್ಷದ 6 ಜನ ಹಾಲಿ ಲೋಕಸಭಾ ಸಂಸದರು ಒಟ್ಟಾಗಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಈ ಬೆನ್ನಲ್ಲೇ ಉದ್ಧವ್ ಠಾಕ್ರೆ ಕರೆದಿದ್ದ ತುರ್ತು ಸಭೆಗೆ ಹಲವು ಶಾಸಕರು ಗೈರುಹಾಜರಾಗಿರುವುದು ಠಾಕ್ರೆ ಸಾಮ್ರಾಜ್ಯದಲ್ಲಿ ಮತ್ತೊಂದು ಸೀಳುವಿಕೆಯ ಮುನ್ಸೂಚನೆ ನೀಡಿದೆ. ಈ ಮಹಾ ಬೆಳವಣಿಗೆಯ ಬೆನ್ನಲ್ಲೇ ಶಿಂಧೆ ಬಣದ ಪ್ರಮುಖ ನಾಯಕ ಶ್ರೀಕಾಂತ್ ಶಿಂಧೆ, ಇದು ಕೇವಲ ಟ್ರೇಲರ್ ಅಷ್ಟೆ, ಅಸಲಿ ಸಿನಿಮಾ ಇನ್ನು ಬಾಕಿ ಇದೆ. ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ರಾಜಕೀಯ ಬಾಂಬ್ ಸ್ಫೋಟಗಳು ಸರಣಿಯಾಗಿ ನಡೆಯಲಿವೆ ಎಂದು ಎಚ್ಚರಿಸಿದ್ದಾರೆ.
ಸಂಜಯ್ ಹರಿಭಾವು ಜಾಧವ್, ಭೌಸಾಹೇಬ್ ರಾಜಾರಾಮ್ ವಾಕಚೌರೆ, ಓಂಪರ್ಕಾಶ್ ಭೂಪಾಲ್‌ಸಿಂಗ್ ನಿಂಬಾಳ್ಳರ್, ಸಂಜಯ್ ದಿನಾ ಪಾಟೀಲ್, ಸಂಜಯ್ ಉತ್ತಮ್‌ರಾವ್ ದೇಶ್‌ಮುಖ್ ಮತ್ತು ನಾಗೇಶ್ ಬಾಪುರಾವ್ ಪಾಟೀಲ್ ಅಷ್ಟಿಕರ್ ಎಂಬ ಆರು ಜನ ಸಂಸದರು ಉದ್ಧವ್ ಠಾಕ್ರೆ ಕೈಬಿಟ್ಟು ಶಿಂಧೆ ಕೈಹಿಡಿದ ನಾಯಕರಾಗಿದ್ದಾರೆ.
ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಆರೂ ಜನ ಸಂಸದರನ್ನು ಪಕ್ಷಕ್ಕೆ ಬರಮಾಡಿಕೊಂಡ ಏಕನಾಥ್ ಶಿಂಧೆ, ನಮ್ಮ ‘ಆಪರೇಷನ್ ಟೈಗರ್’ ಅತ್ಯಂತ ಯಶಸ್ವಿಯಾಗಿದೆ. ಈಗ ನಮ್ಮ ಬಳಿ ಕೇವಲ ಒಬ್ಬರಲ್ಲ, ಆರು ಜನ ಅಸಲಿ ಹುಲಿಗಳಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಂಡಾಯದಿಂದಾಗಿ ಸಂಸತ್ತಿನಲ್ಲಿ ಹಾಗೂ ಮಹಾರಾಷ್ಟ್ರದ ಸ್ಥಳೀಯ ರಾಜಕಾರಣದಲ್ಲಿ ಶಿಂಧೆ ನೇತೃತ್ವದ ಶಿವಸೇನೆಯ ಬಲ ದುಪ್ಪಟ್ಟಾದಂತಾಗಿದೆ.
ಮತದಾರರಿಗೆ ಮಾಡಿದ ಮಹಾ ದ್ರೋಹ: ಆದಿತ್ಯ ಠಾಕ್ರೆ ಆಕ್ರೋಶ
ತಮ್ಮ ಪಕ್ಷದ ಸಂಸದರ ಈ ಹಠಾತ್ ದ್ರೋಹದ ನಡೆಗೆ ಉದ್ಧವ್ ಠಾಕ್ರೆ ಪುತ್ರ, ಯುವ ನಾಯಕ ಆದಿತ್ಯ ಠಾಕ್ರೆ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಪಕ್ಷಾಂತರ ಮಾಡಿದ ಈ ಸಂಸದರು ತಮಗೆ ವೋಟ್ ಹಾಕಿದ ಜನರಿಗೆ ಮಹಾ ದ್ರೋಹ ಬಗೆದಿದ್ದಾರೆ. ಇವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದು ಶಿವಸೇನೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಒಳಗೊಂಡ ಮಹಾ ವಿಕಾಸ್ಅ ಘಾಡಿ ಹಾಗೂ ಇಂಡಿಯಾ ಒಕ್ಕೂಟದ ನಾಯಕರ ಮತ್ತು ಕಾರ್ಯಕರ್ತರ ಪರಿಶ್ರಮದಿಂದ. ಆದರೆ ಈಗ ಅಧಿಕಾರದ ಆಸೆಗೆ ಬಿದ್ದು ಜನಾದೇಶವನ್ನು ಗಾಳಿಗೆ ತೂರಿದ್ದಾರೆ. ಜನರೇ ಇವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಟ್ಟಾರೆಯಾಗಿ, ಶಿವಸೇನೆಯಲ್ಲಿ ಈ ಹಿಂದೆ ನಡೆದಿದ್ದ ಬಂಡಾಯದ ಕಹಿ ನೆನಪು ಮಾಸುವ ಮುನ್ನವೇ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಮುಂಬೈ ರಾಜಕೀಯ ಕೋಟೆಯಲ್ಲಿ ಠಾಕ್ರೆ ಕುಟುಂಬದ ಅಸ್ತಿತ್ವಕ್ಕೆ ದೊಡ್ಡ ಸವಾಲು ಎದುರಾಗಿದೆ,






