ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್ ಮತ ಚಲಾವಣೆ ವೇಳೆ ಹೈಡ್ರಾಮಾ!
Views: 126
ಕನ್ನಡ ಕರಾವಳಿ ಸುದ್ದಿ: ಬಿಜೆಪಿ ಉಚ್ಚಾಟಿತ ಶಾಸಕ ಯತ್ನಳ್ ಮತ ಹಾಕಲು ಬಂದ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಯತ್ನಾಳ್ ಮತ ಹಾಕಲು ಬಂದಾಗ ಮತಕೇಂದ್ರದಲ್ಲಿದ್ದ ಕಾಂಗ್ರೆಸ್‌ನ ಉಗ್ರಪ್ಪ ಆಕ್ಷೇಪ ತೆಗೆದಿದ್ದು, ಮತ ಹಾಕುವ ಬಗ್ಗೆ ಅವರು ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಹೀಗಾಗಿ ಅವರ ಮತವನ್ನು ಮತಪೆಟ್ಟಿಗೆಗೆ ಹಾಕಬೇಡಿ ಎಂದು ಚುನಾವಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಆದರೆ ಇದನ್ನು ಬಿಜೆಪಿ ಮತಗಟ್ಟೆ ಏಜೆಂಟ್‌ಗಳಾದ ಎನ್.ರವಿಕುಮಾರ್, ಕೆ.ಎಸ್.ನವೀನ್ ವಿರೋಧಿಸಿದ್ದು, ಅಂತಿಮವಾಗಿ ಉಗ್ರಪ್ಪ ಆಕ್ಷೇಪವನ್ನು ತಿರಸ್ಕರಿಸಿ ಯತ್ನಾಳ್‌ಗೆ ಮತ ಹಾಕಲು ಚುನಾವಣಾಧಿಕಾರಿ ಅವಕಾಶ ನೀಡಿದ್ದಾರೆ.
ನನ್ನ ನಿಷ್ಠೆ ಯಾವತ್ತಿದ್ದರೂ ಬಿಜೆಪಿಗೆ: ಯತ್ನಾಳ್
ನಾನು ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿಲ್ಲ, ಗೌಪ್ಯತೆ ಕಾಪಾಡಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿ, ಗೌಪ್ಯ ಮತದಾನ ಉಲ್ಲಂಘಿಸಿರುವ ವಿರುದ್ಧ ಕಾಂಗ್ರೆಸ್ ದೂರು ಹಿನ್ನೆಲೆ ಪ್ರತಿಕ್ರಿಯಿಸಿ, ನಾನು ನಿಯಮ ಉಲ್ಲಂಘಿಸಿಲ್ಲ. ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿಲ್ಲ.
ಮತದಾನದ ಕೊಠಡಿ ಒಳಗೆ ನಾನು ಯಾರಿಗೆ ಮತ ಹಾಕಿದ್ದೇನೆ ಅನ್ನೋದು ಗೌಪ್ಯವಾಗಿದೆ. ಮತ ಹಾಕಿ ಅಲ್ಲೇ ತೋರಿಸಿದರೆ ಆಗ ಇನ್ ವ್ಯಾಲಿಡ್ ಆಗುತ್ತಿತ್ತು.
ನಾನು ಗೌಪ್ಯವಾಗಿಯೇ ಮತ ಹಾಕಿದ್ದೇನೆ. ಯಾರಿಗೂ ತೋರಿಸಿಲ್ಲ. ಹೀಗಾಗಿ ನಾನು ಹಾಕಿರೋದು ವ್ಯಾಲಿಡ್ ವೋಟೇ. ನಾನು ನಿತಿನ್ ನಬಿನ್ ಅವರಿಗೆ ಪತ್ರ ಬರೆದಿದ್ದು ಹೌದು. ನನಗೆ ಲಿಂಗರಾಜ ಪಾಟೀಲ್ಗೆ ಹೆಸರು ಆಯ್ಕೆ ಮಾತ್ರ, ಅದನ್ನೇ ಪತ್ರದಲ್ಲಿ ಹೇಳಿದ್ದೇನೆ. ಆದರೆ ಮತದಾನದ ಕೊಠಡಿಯಲ್ಲಿ ಯಾರಿಗೆ ಓಟು ಹಾಕಿದ್ದೇನೋ ಅದನ್ನು ನಾನು ತೋರಿಸಿಲ್ಲ, ಗೌಪ್ಯತೆ ಕಾಪಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾನು ಬಿಜೆಪಿ ಚಿಹ್ನೆಯಡಿ ಗೆದ್ದು ಶಾಸಕನಾಗಿದ್ದೆ. ನಾನು ಆತ್ಮಸಾಕ್ಷಿಯಾಗಿ ಯಾರಿಗೆ ಮತ ಹಾಕಬೇಕೋ ಹಾಕಿದ್ದೇನೆ. ಅಶ್ವತ್ ನಾರಾಯಣ್ ಕರೆ ಮಾಡಿದ್ದರು. 49 ಶಾಸಕರು ಮನವಿ ಮಾಡಿದ್ದರು. ಬಿಜೆಪಿ ಪಕ್ಷ ಸೂಚನೆ ಕೊಟ್ಟಿದ್ದಕ್ಕೆ ಮತ ಹಾಕಿದ್ದೇನೆ ಎಂದರು.
ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‌ಗೆ ಪತ್ರ ಬರೆದಿರುವ ಅವರು, ‘ನಾನು ಬಿಜೆಪಿಯಿಂದ ಚುನಾಯಿತನಾಗಿದ್ದೇನೆ ಹೀಗಾಗಿ ಪಕ್ಷದ ಅಭ್ಯರ್ಥಿ ಲಿಂಗರಾಜ ಪಾಟೀಲರಿಗೆ ಮತ ಹಾಕುತ್ತೇನೆ’ ಎಂದು ಹೇಳಿದ್ದಾರೆ.
‘ನನ್ನ ಹೋರಾಟ ಪಕ್ಷದ ವಿರುದ್ಧವಲ್ಲ, ಕುಟುಂಬ ರಾಜಕೀಯ, ಹೊಂದಾಣಿಕೆ ರಾಜಕಾರಣದ ವಿರುದ್ಧ ಮಾತ್ರ. ನಾನು ಬಿಜೆಪಿ ತತ್ವ, ಸಿದ್ಧಾಂತ, ರಾಷ್ಟ್ರೀಯತೆ, ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿಕೊಂಡಿದ್ದೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಿಂದ ಭ್ರಷ್ಟಾಚಾರ ಮಿತಿ ಮೀರಿದೆ, ಆಡಳಿತ ವೈಫಲ್ಯವಾಗಿದೆ, ಓಲೈಕೆ ರಾಜಕಾರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಜನರ ವಿಶ್ವಾಸ ಗಳಿಸಬೇಕಾದರೆ ರಾಜ್ಯ ಬಿಜೆಪಿಗೆ ಸಮರ್ಥ ನಾಯಕತ್ವದ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ರಾಜ್ಯದತ್ತ ಗಮನ ಹರಿಸಬೇಕು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಆಹವಾಲು ಆಲಿಸಬೇಕು, ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.






